ಮೈಸೂರು: ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಅಮಾವಾಸ್ಯೆ ರಾತ್ರಿ ನಡೆದಿರುವ ಶಂಕಿತ ವಾಮಾಚಾರ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಗ್ರಾಮದ ಮುಖ್ಯ ರಸ್ತೆಯಲ್ಲೇ ರಂಗೋಲೆ ಹಾಕಿ ಅದರ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆ, ಕುಂಕುಮ ಹಾಗೂ ನಿಂಬೆಹಣ್ಣು ಇಡಲಾಗಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸ್ಥಳೀಯರು ರಸ್ತೆ ಮಧ್ಯೆ ಈ ದೃಶ್ಯ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಅಮಾವಾಸ್ಯೆ ಇದ್ದ ಹಿನ್ನೆಲೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂತಹ ಕೃತ್ಯಗಳಿಂದ ಮಹಿಳೆಯರು ಹಾಗೂ ಮಕ್ಕಳು ಭಯಭೀತರಾಗಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥ ಮುದ್ದುಮಾದಶೆಟ್ಟಿ, “ಇದು ನಮ್ಮ ಗ್ರಾಮದ ಮಧ್ಯಭಾಗದಲ್ಲೇ ನಡೆದಿರುವ ಗಂಭೀರ ಘಟನೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತ ಎಚ್ಚರಿಕೆ ವಹಿಸಬೇಕು” ಎಂದು ಒತ್ತಾಯಿಸಿದರು.
ಮಾಹಿತಿ ಪಡೆದ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಹಿಂದಿನ ಉದ್ದೇಶ ಹಾಗೂ ಕೃತ್ಯ ಎಸಗಿದವರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಗಮನಾರ್ಹವಾಗಿ, ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಸಿವಿಲ್ ಪ್ರಕರಣ ತನ್ನ ಪರವಾಗಿ ತೀರ್ಪು ಬರಬೇಕೆಂಬ ಉದ್ದೇಶದಿಂದ ನ್ಯಾಯಾಧೀಶರ ಆಸನದ ಮೇಲೆ ಸಾಸಿವೆ ಚೆಲ್ಲಿ ಮಾಟಮಂತ್ರದ ಪ್ರಯತ್ನ ನಡೆಸಿದ ಆರೋಪದಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದ ಘಟನೆ ಕೂಡ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.



