ಮೈಸೂರು: ಮೈಸೂರಿನ ಕ್ಲಿನಿಕ್‌ನಲ್ಲಿ ಕುಳಿತು ಅಮೆರಿಕದ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗವನ್ನು ನಿರ್ವಹಿಸುತ್ತಿರುವ ಭಾರತೀಯ ವೈದ್ಯರ ಸಾಧನೆ ಜಾಗತಿಕ ಆರೋಗ್ಯ ಕ್ಷೇತ್ರದ ಗಮನ ಸೆಳೆದಿದೆ. ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ, ಟೆಲಿ-ನ್ಯೂರಾಲಜಿ ತಂತ್ರಜ್ಞಾನದ ಮೂಲಕ ಅಮೆರಿಕದ ನಾಲ್ಕು ರಾಜ್ಯಗಳ ಆಸ್ಪತ್ರೆಗಳಿಗೆ ನೈಜ ಸಮಯದಲ್ಲಿ ತುರ್ತು ನರರೋಗ ಚಿಕಿತ್ಸಾ ಸಲಹೆ ನೀಡುತ್ತಿದ್ದು, ಸಾವಿರಾರು ಕಿಲೋಮೀಟರ್ ದೂರವಿದ್ದರೂ ಜೀವ ಉಳಿಸುವ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.
ಡಾ. ಗೌಡ ಪ್ರತಿ ತಿಂಗಳು ಸುಮಾರು 130 ಗಂಟೆಗಳ ಕಾಲ ಕಾನ್ಸಾಸ್, ಮಿಸೌರಿ, ಒಕ್ಲಹೋಮ ಹಾಗೂ ಅರ್ಕಾನ್ಸಾಸ್ ರಾಜ್ಯಗಳ ಆಸ್ಪತ್ರೆಗಳೊಂದಿಗೆ ಸಂಪರ್ಕದಲ್ಲಿದ್ದು, ಮೆದುಳಿನ ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವ ಸೇರಿದಂತೆ ತುರ್ತು ನರರೋಗ ಪ್ರಕರಣಗಳಿಗೆ ಕ್ಷಿಪ್ರ ವೈದ್ಯಕೀಯ ನಿರ್ಧಾರಗಳನ್ನು ನೀಡುತ್ತಿದ್ದಾರೆ. ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ತಜ್ಞರ ಸಲಹೆ ಲಭ್ಯವಾಗುವುದರಿಂದ ರೋಗಿಗಳ ಜೀವ ಉಳಿಸುವ ಸಾಧ್ಯತೆ ಹೆಚ್ಚುತ್ತಿದೆ.
ವಿಜಯಪುರದ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಳಿಕ 2002ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿದ ಅವರು, ನಂತರ ಅಮೆರಿಕದಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ನ್ಯೂರಾಲಜಿ ರೆಸಿಡೆನ್ಸಿ ಪೂರ್ಣಗೊಳಿಸಿ, ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಸ್ಟ್ರೋಕ್ ವಿಭಾಗದ ನಿರ್ದೇಶಕರಾಗಿ ಹಾಗೂ ಕೆಂಟುಕಿಯ ಬ್ಯಾಪ್ಟಿಸ್ಟ್ ಹೆಲ್ತ್‌ನಲ್ಲಿ ಸೇವೆ ಸಲ್ಲಿಸಿದರು. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ 25ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಟೆಲಿ-ಮೆಡಿಸಿನ್ ಮೂಲಕ ತಜ್ಞ ಸೇವೆ ನೀಡಿದ ಅನುಭವವನ್ನು ಅವರು ಹೊಂದಿದ್ದಾರೆ.
ಕೋವಿಡ್ ಅವಧಿಯಲ್ಲಿ ಭಾರತಕ್ಕೆ ಮರಳಿ ಮೈಸೂರು ಭಾಗದ ರೋಗಿಗಳಿಗೆ ಸೂಪರ್ ಸ್ಪೆಷಾಲಿಟಿ ಸೇವೆ ನೀಡಿದ್ದ ಡಾ. ಗೌಡ, 2026ರಿಂದ ಮತ್ತೆ ಅಮೆರಿಕದ ಆಸ್ಪತ್ರೆಗಳೊಂದಿಗೆ ಟೆಲಿ-ನ್ಯೂರಾಲಜಿ ಸೇವೆ ಆರಂಭಿಸಿದ್ದಾರೆ. ಭಾರತದಲ್ಲಿ ಮಾನವ ಸಂಪನ್ಮೂಲದ ಕೊರತೆಯಿಲ್ಲ. ಆರೋಗ್ಯ ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡಿ ದೇಶವ್ಯಾಪಿ ಟೆಲಿ-ಮೆಡಿಸಿನ್ ಜಾಲವನ್ನು ಬಲಪಡಿಸಿದರೆ ಗ್ರಾಮೀಣ ಭಾಗಕ್ಕೂ ವಿಶ್ವಮಟ್ಟದ ತಜ್ಞ ಚಿಕಿತ್ಸೆ ತಲುಪಿಸಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



