ಮುಂಬೈ: ನಿರ್ಮಾಪಕ ಬೋನಿ ಕಪೂರ್ ಕುಟುಂಬದಲ್ಲಿ ಹಲವು ವರ್ಷಗಳಿಂದ ಕಂಡುಬಂದಿದ್ದ ಭಿನ್ನಾಭಿಪ್ರಾಯಗಳಿಗೆ ಪುತ್ರಿ ಅನ್ಶುಲಾ ಕಪೂರ್ ಅವರ ಮದುವೆ ಹೊಸ ತಿರುವು ನೀಡಿದೆ. ಜುಲೈ 6ರಂದು ಮುಂಬೈನಲ್ಲಿ ಸ್ಕ್ರಿಪ್ಟ್ ರೈಟರ್ ರೋಹನ್ ಥಕ್ಕರ್ ಅವರನ್ನು ವಿವಾಹವಾದ ಅನ್ಶುಲಾ, ತಮ್ಮ ಮದುವೆಯ ಮೂಲಕ ಕಪೂರ್ ಕುಟುಂಬವನ್ನು ಒಂದೇ ವೇದಿಕೆಗೆ ಕರೆತಂದಿದ್ದಾರೆ.
ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಶೌರಿ ಅವರ ಮಕ್ಕಳಾದ ಅರ್ಜುನ್ ಕಪೂರ್ ಮತ್ತು ಅನ್ಶುಲಾ, ಶ್ರೀದೇವಿಯೊಂದಿಗೆ ತಂದೆಯ ಎರಡನೇ ವಿವಾಹದ ಬಳಿಕ ಕುಟುಂಬದಿಂದ ದೂರ ಉಳಿದಿದ್ದರು. ತಾಯಿಯ ಮೇಲಿನ ಅನ್ಯಾಯದ ನೋವಿನಿಂದ ತಂದೆಯೊಂದಿಗೆ ಅಂತರ ಕಾಯ್ದುಕೊಂಡಿದ್ದ ಇಬ್ಬರೂ, ಈ ವಿಚಾರವನ್ನು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು.
ಮೋನಾ ಶೌರಿ 2012ರಲ್ಲಿ ನಿಧನರಾದರೂ ಕುಟುಂಬದ ಬಿರುಕು ಮುಂದುವರಿದಿತ್ತು. ಆದರೆ ಶ್ರೀದೇವಿ ನಿಧನದ ಬಳಿಕ ಅರ್ಜುನ್ ಕಪೂರ್ ಹಾಗೂ ಅನ್ಶುಲಾ, ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಅವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡರು. ನಂತರ ನಾಲ್ವರು ಸಹೋದರ-ಸಹೋದರಿಯರು ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಆರಂಭಿಸಿದರು.
ಅನ್ಶುಲಾ ಕಪೂರ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕುಟುಂಬದ ಎಲ್ಲ ಸದಸ್ಯರು ಒಂದೇ ಫ್ರೇಮ್ನಲ್ಲಿ ನಗುನಗುತ್ತ ಕಾಣಿಸಿಕೊಂಡಿರುವ ಚಿತ್ರಗಳು ವಿಶೇಷ ಗಮನ ಸೆಳೆದಿವೆ. ಬೋನಿ ಕಪೂರ್ ಅವರ ಇಬ್ಬರು ಪತ್ನಿಯರ ಮಕ್ಕಳು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಂದಾಗಿ ಕಾಣಿಸಿಕೊಂಡಿರುವ ಈ ಕ್ಷಣವನ್ನು ಅಭಿಮಾನಿಗಳು ‘ಕಪೂರ್ ಕುಟುಂಬದ ಭಾವನಾತ್ಮಕ ಪುನರ್ಮಿಲನ’ ಎಂದು ಕೊಂಡಾಡುತ್ತಿದ್ದಾರೆ.



