ಬೆಂಗಳೂರು: ಒಪ್ಪಂದದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಅಹಿಂದ ಧ್ವಜವನ್ನು ಮುಂದೂಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ವರ್ಷಗಳ ಬಳಿಕವಾದರೂ ಸಿದ್ದರಾಮಯ್ಯ ಅವರು ಸ್ಥಾನದಿಂದ ಕೆಳಗಿಳಿಯಲೇಬೇಕಿತ್ತು. ಎಲ್ಲಾ ಸಂದರ್ಭಗಳಿಗೂ ನಾವು ಸಿದ್ಧರಾಗಿರಬೇಕು ಎಂದು ಹೇಳಿದರು.
ಅಹಿಂದ ವರ್ಗದಲ್ಲಿ ನೂರಾರು ಜಾತಿಗಳಿದ್ದು, ಆ ವರ್ಗದ ಪರ ಧ್ವಜವನ್ನು ಯಾರಾದರೂ ಒಬ್ಬರು ಮುನ್ನಡೆಸಲೇಬೇಕು ಎಂದು ಹೇಳಿದ ಅವರು, “ನಾನು ಅಹಿಂದ ಧ್ವಜವನ್ನು ಕೊಂಡೊಯ್ಯುತ್ತೇನೆ. ಹೊಸ ಅಹಿಂದ ನಾಯಕ ಉದಯವಾಗಲೇಬೇಕು. ರಾಜ್ಯದಲ್ಲಿ ಆ ವ್ಯವಸ್ಥೆ ಇದೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತು ದೆಹಲಿಯಲ್ಲಿ ಈಗಾಗಲೇ ಎಲ್ಲಾ ಮಟ್ಟದ ಮಾತುಕತೆ ನಡೆದಿತ್ತು. ಬೆಂಗಳೂರಿನಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ನಮ್ಮನ್ನು ಆಗಲೂ ಯಾರೂ ಕೇಳಿರಲಿಲ್ಲ. ಸಿದ್ದರಾಮಯ್ಯ ಅವರೇ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸತೀಶ್ ಜಾರಕಿಹೊಳಿ, “ಇದು ಸಂಪೂರ್ಣ ಸುಳ್ಳು. ಯಾರೋ ಹಾಕಿರುವ ಪೋಸ್ಟ್‌ಗೆ ಮಹತ್ವ ಕೊಡಬೇಕಾಗಿಲ್ಲ. ಯಾವುದೇ ಸಹಿ ಸಂಗ್ರಹ ನಡೆದಿಲ್ಲ” ಎಂದರು.
37 ಮಂದಿ ಶಾಸಕರು ಸಹಿ ಹಾಕಿದ್ದರೆ ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದ ಅವರು, ಒಪ್ಪಂದದ ಪ್ರಕಾರವೇ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ಪುನರುಚ್ಚರಿಸಿದರು.
ಹೈಕಮಾಂಡ್ ಹೇಳಿದ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಮೊದಲೇ ಹೇಳಿದ್ದರು. ಈಗ ಅವರು ಹೇಳಿದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಬಗ್ಗೆ ಚರ್ಚೆ ಮಾಡಿಕೊಂಡು ಬರುತ್ತಾರೆ. ಬಳಿಕ ಅವರು ಏನು ತೀರ್ಮಾನಿಸುತ್ತಾರೋ ಅದನ್ನು ಆಧರಿಸಿ ಮುಂದಿನ ನಿರ್ಧಾರವಾಗುತ್ತದೆ ಎಂದರು.



