ಬೆಂಗಳೂರು: ಇತ್ತೀಚೆಗೆ ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ Dharwad Protest ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಸಾಧಕ–ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಅಂತಿಮವಾಗಿ ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ. ಇದರಂತೆ, ಕರ್ನಾಟಕದ ವಿವಿಧ ಇಲಾಖೆಗಳಲ್ಲಿರುವ ಸುಮಾರು 56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಸ್ಪಷ್ಟ ಫಲ ದೊರಕಿದಂತಾಗಿದೆ.
ರಾಜ್ಯ ಸರ್ಕಾರವು ಹಲವು ಸವಾಲುಗಳ ನಡುವೆಯೇ 15% ಎಸ್‌ಸಿ ಮೀಸಲಾತಿಗೆ ಒಳಮೀಸಲಾತಿ ನೀಡಿ ತಾತ್ಕಾಲಿಕ ಪರಿಹಾರವಾಗಿ ನೇಮಕಾತಿಗೆ ಮುಂದಾಗಿದ್ದು, ಎಸ್‌ಸಿ ಮೀಸಲಾತಿಯನ್ನು 17%ಕ್ಕೆ ಹೆಚ್ಚಿಸಿ ತಕ್ಷಣ ಜಾರಿಗೆ ತರುವುದು ಕಾನೂನು ಅಡೆತಡೆಗಳ ಕಾರಣ ಅಸಾಧ್ಯವಾಗಿದೆ. ರಾಜ್ಯಪಾಲರು ಒಳಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿದ್ದರೂ, ಕಾನೂನು ಹೋರಾಟ ಮುಂದುವರಿಸಬೇಕಿರುವುದರಿಂದ ಹಳೆಯ ಸೂತ್ರದ ಅನ್ವಯವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.



