ಯಾದಗಿರಿ: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 1,217 ಕೇಂದ್ರಗಳಲ್ಲಿ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಬಿಗಿ ಭದ್ರತೆ ಒದಗಿಸಲಾಗಿದೆ.
ಆದರೆ, ಯಾದಗಿರಿಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಕುರಿತು ಗೊಂದಲಕ್ಕೀಡಾಗಿದ್ದಾರೆ. ಹಾಲ್ ಟಿಕೆಟ್ನಲ್ಲಿ ನಮೂದಿಸಿರುವ ವಿಳಾಸ ಮತ್ತು ವಾಸ್ತವಿಕ ಕೇಂದ್ರ ವಿಳಾಸ ಬೇರೆಯಾಗಿದ್ದ ಕಾರಣ, ಕೆಲ ವಿದ್ಯಾರ್ಥಿಗಳು ಸಬಾ ಪಿಯು ಕಾಲೇಜು ಕೇಂದ್ರವನ್ನು ಹುಡುಕಲು ಪರದಾಡಬೇಕಾಯಿತು. ಉದಾಹರಣೆಗೆ, ಕಾಲೇಜು ಲುಂಬಿನಿ ಪಾರ್ಕ್ ಹತ್ತಿರ ಇದ್ದರೂ, ಹಾಲ್ ಟಿಕೆಟ್ನಲ್ಲಿ ಗಂಜ್ ರೋಡ್ ಎಂದು ಉಲ್ಲೇಖವಾಗಿತ್ತು. ಅಂತಿಮವಾಗಿ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 17ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ನಿಷೇಧ, ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧ, ಚಿತ್ರೀಕರಣ ಹಾಗೂ ಸ್ಫೋಟಕ ವಸ್ತು ನಿರ್ಬಂಧ ಸೇರಿದಂತೆ ಸಂಪೂರ್ಣ ಭದ್ರತಾ ಕ್ರಮಗಳು ಜಾರಿಗೆ ಬಂದಿವೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಅವರು “ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ” ಎಂದು ಸಂದೇಶ ನೀಡಿದ್ದಾರೆ.



