ಹೋಳಿ ಅಂದ್ರೆ ಬಣ್ಣಗಳ ಹಬ್ಬ, ಆದರೆ ಸಂಭ್ರಮದ ನಂತರ ಮೈಗೆ ಬಿದ್ದ ಬಣ್ಣವನ್ನು ತೆಗೆಯುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ಈ ಕೆಲವು ಸರಳ ವಿಧಾನಗಳ ಮೂಲಕ ಬಣ್ಣವನ್ನು ಸುಲಭವಾಗಿ ಹೋಗಲಾಡಿಸಬಹುದು.
ಓಕುಳಿಯಾಡುವ ಮೊದಲು ಚರ್ಮ ಮತ್ತು ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿ, ಬಣ್ಣ ಚರ್ಮಕ್ಕೆ ಆಳವಾಗಿ ತೂರಿಕೊಳ್ಳುವುದನ್ನು ತಡೆಯಬಹುದು. ಹೋಳಿ ನಂತರ, ಮುಖ ಮತ್ತು ದೇಹಕ್ಕೆ ಕಡ್ಲೆಹಿಟ್ಟು ಮತ್ತು ಮೊಸರು ಪೇಸ್ಟ್ ಹಚ್ಚಿ ಸ್ವಲ್ಪ ಒಣಗಿದ ಮೇಲೆ ಮಸಾಜ್ ಮಾಡಿ ತೊಳೆಯಬಹುದು. ಬಣ್ಣವನ್ನು ಹಗುರಗೊಳಿಸಲು ಮೊಸರು ಮತ್ತು ನಿಂಬೆ ರಸ ಬಳಸಿ 10–15 ನಿಮಿಷ ಬಿಟ್ಟರೆ ಸಹಾಯವಾಗುತ್ತದೆ.
ಹಸಿ ಹಾಲು ಮತ್ತು ಹತ್ತಿ ಅಥವಾ ಐಚ್ಛಿಕವಾಗಿ ಜೇನುತುಪ್ಪ ಬಳಸಿ ಬಣ್ಣವನ್ನು ತೆಗೆಯಬಹುದು. ತ್ವಚೆ ಕೆಂಪಾಗಿದರೆ ಅಥವಾ ಸೂಕ್ಷ್ಮವಾಗಿದ್ದರೆ, ರೋಸ್ ವಾಟರ್ ಮತ್ತು ಅಲೋವೆರಾ ಜೆಲ್ ಹಚ್ಚಿ ಶಾಂತಗೊಳಿಸಬಹುದು. ಕೂದಲಿಗೆ ಬಣ್ಣ ಹೋದರೆ ಮೊಸರು ಮತ್ತು ಜೇನುತುಪ್ಪ ಮಿಶ್ರಣ ಹಚ್ಚಿ 20 ನಿಮಿಷ ಬಿಟ್ಟು ತೊಳೆಯುವ ಮೂಲಕ ಕೂದಲು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಬಹುದು.
ಈ ಸರಳ ಮನೆಮದ್ದುಗಳ ಬಳಕೆ ಮೂಲಕ ಹೋಳಿ ಬಣ್ಣವನ್ನು ಸುಲಭವಾಗಿ ತೆರವುಗೊಳಿಸಬಹುದು ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸಬಹುದು.



