ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಮೂರು ದಿನಗಳ ಆರಾಧನಾ ಮಹೋತ್ಸವದ ಸಮಾರೋಪದ ಅಂಗವಾಗಿ ಸೋಮವಾರ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರ ವೇದಘೋಷ, ವಾದ್ಯವೈಭವ ಹಾಗೂ ಭಕ್ತಿ ಸಂಗೀತದ ನಡುವೆ ನಡೆದ ರಥೋತ್ಸವದಲ್ಲಿ ಭಕ್ತರು ತಾಳಕ್ಕೆ ಹೆಜ್ಜೆ ಹಾಕುತ್ತ ರಥವನ್ನು ಎಳೆದು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ, ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಭಕ್ತಿ, ಜ್ಞಾನ, ಧರ್ಮನಿಷ್ಠೆ ಹಾಗೂ ಸದಾಚಾರದ ದಾರಿದೀಪವಾಗಿದ್ದಾರೆ. ಅವರ ಆರಾಧನೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಅವರು ತೋರಿದ ಧರ್ಮಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದರು.
ರಾಘವೇಂದ್ರ ಸ್ವಾಮಿಗಳು ಪ್ರಹ್ಲಾದರಾಜರಾಗಿ, ಬಳಿಕ ವ್ಯಾಸರಾಜರಾಗಿ ಭಕ್ತಿ–ಜ್ಞಾನವನ್ನು ಪ್ರಸಾರ ಮಾಡಿ, ರಾಘವೇಂದ್ರ ತೀರ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಥೋತ್ಸವದ ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರಾಧನಾ ಮಹೋತ್ಸವಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.
ಸಮಾಜದ ಹಿರಿಯ ಮುಖಂಡ ಕೃಷ್ಣ ಕುಲಕರ್ಣಿ ಮಾತನಾಡಿ, ನಂಬಿದ ಭಕ್ತರನ್ನು ರಾಯರು ಕೈಬಿಟ್ಟ ಉದಾಹರಣೆಗಳಿಲ್ಲ. 306 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಮಠದಲ್ಲಿ ಎಲ್ಲ ಸಮಾಜ ಬಾಂಧವರ ಸಹಕಾರದಿಂದ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸೇವೆ ಸಲ್ಲಿಸುವವರಿಗೆ ರಾಯರು ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಆಶಿಸಿದರು.
ಶನಿವಾರದಿಂದಲೇ ನೂರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಹೊಂಬಳ ಮನೆತನದವರಿಂದ ಪೂಜಿಸಲ್ಪಡುತ್ತಿರುವ ಈ ಮಠದ ಆರಾಧನಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವೈಭವ ಪಡೆಯುತ್ತಿದೆ. ವಿವಿಧ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ರಾಯರ ವೃಂದಾವನದ ದರ್ಶನ ಪಡೆದ ಭಕ್ತರು ಕಣ್ತುಂಬಿಕೊಂಡರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ನೀಲಪ್ಪ ಕರ್ಜೆಕಣ್ಣವರ, ಎ.ಪಿ. ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲಕುಲಕರ್ಣಿ, ವೇದವ್ಯಾಸ ಹೊಂಬಳ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ಮನೋಜ ಹೊಂಬಳ, ದಿಗಂಬರ ಪೂಜಾರ, ಅನಿಲ ಕುಲಕರ್ಣಿ, ಬಾಬು ಅಳವಂಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಪ್ರಾಣೇಶ ಬೆಳ್ಳಟ್ಟಿ, ಗಂಗಾಧರ ಮ್ಯಾಗೇರಿ, ಕಿರಣ ನವಲೆ, ರಾಮು ಪೂಜಾರ, ರಾಘವೇಂದ್ರ ಗೊಗ್ಗಿ, ನಾಗರಾಜ ಪೂಜಾರ, ಕೃಷ್ಣಕುಮಾರ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಗಂಗಾಧರ ಗೋಡಿ, ರಮೇಶ ತೊರಗಲ್, ರವೀಂದ್ರ ರಾಯಚೂರ, ನಿಂಗಪ್ಪ ತಹಸೀಲ್ದಾರ, ಬಸವರಾಜ ಚಕ್ರಸಾಲಿ, ಗಂಗಾಧರ ಹಳ್ಳಿಕೇರಿ, ರಾಘವೇಂದ್ರ ಮಿಸ್ಕಿನ್, ವೆಂಕಟೇಶ ಮಾತಾಡೆ ಸೇರಿದಂತೆ ವಿವಿಧ ಮುಖಂಡರು, ಗಣ್ಯರು ಹಾಗೂ ನೂರಾರು ಮಹಿಳೆಯರು ಮತ್ತು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗುರುವಿನ ಆರಾಧನೆಯ ನಿಜವಾದ ಅರ್ಥ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ. ದುಷ್ಟ ಗುಣಗಳನ್ನು ತ್ಯಜಿಸಿ ಹರಿಭಕ್ತಿ, ಶಾಸ್ತ್ರನಿಷ್ಠೆ ಹಾಗೂ ಧರ್ಮಮಾರ್ಗದಲ್ಲಿ ಸಾಗಿದಾಗ ಮಾತ್ರ ಗುರುರಾಯರ ಆರಾಧನೆ ಸಾರ್ಥಕವಾಗುತ್ತದೆ.
ಹನುಮಂತಾಚಾರ್ಯ ಹೊಂಬಳ



