HomeGadag Newsದೇವರ ಆಶೀರ್ವಾದ ಇದ್ದರೆ ಎಲ್ಲವೂ ಸರಿ: ಡಿಕೆಶಿ ಕುರಿತು ಮಹತ್ವದ ಹೇಳಿಕೆ ನೀಡಿದ ಮುಕ್ತಿಮಂದಿರ ಶ್ರೀಗಳು

ದೇವರ ಆಶೀರ್ವಾದ ಇದ್ದರೆ ಎಲ್ಲವೂ ಸರಿ: ಡಿಕೆಶಿ ಕುರಿತು ಮಹತ್ವದ ಹೇಳಿಕೆ ನೀಡಿದ ಮುಕ್ತಿಮಂದಿರ ಶ್ರೀಗಳು

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕೂರಲಿದ್ದಾರೆಯೇ ಎಂಬ ಪ್ರಶ್ನೆಗೆ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದ ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಏನೂ ಹೇಳಲ್ಲ. ಬೇಕಾದಷ್ಟು ಜನ ಈಗಾಗಲೇ ಹೇಳಿದ್ದಾರೆ. ದೇವರ ಆಶೀರ್ವಾದ ಇರುವ ತನಕ ಎಲ್ಲವೂ ಸರಿಯಾಗುತ್ತದೆ, ಒಳ್ಳೆಯದಾಗುತ್ತದೆ ಎಂದು ಶ್ರೀಗಳು ಹೇಳಿದರು.

ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮುಕ್ತಿಮಂದಿರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಪ್ರಸನ್ನ ರೇಣುಕ ವೀರಗಂಗಾಧರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು. ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಗಳ ಸ್ಮರಣೆ ಮಾಡಿದರು.

ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕೈ-ಕಾಲು ತೊಳೆದುಕೊಂಡು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಠದ ನೋಣವಿನಕೆರೆ ಶ್ರೀಗಳು ಹಾಗೂ ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಹಿಂದೆ ನೀಡಿದ್ದ ರುದ್ರಾಕ್ಷಿ, ಅಜ್ಜನವರ ಮೂರ್ತಿ

ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಜ್ಜನವರ ರುದ್ರಾಕ್ಷಿ ಹಾಗೂ ಅಜ್ಜನವರ ಮೂರ್ತಿಯನ್ನು ನೀಡಲಾಗಿತ್ತು ಎಂದು ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿ ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರು ಭಸ್ಮವನ್ನು ತೆಗೆದುಕೊಂಡಿದ್ದು, ಅವರು ಭಸ್ಮ ಹಚ್ಚಿಕೊಂಡು ಅಜ್ಜನವರನ್ನು ಸ್ಮರಿಸುತ್ತಾರೆ ಎಂದೂ ಹೇಳಿದರು.

ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆ ನಿರಾಕರಣೆ

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, “ಬೇಕಾದವರು ಬೇಕಾದ ರೀತಿಯಲ್ಲಿ ಮಾತನಾಡುತ್ತಾರೆ. ರಾಜಕೀಯದಲ್ಲಿ ಎಲ್ಲರೂ ಒಂದೇ ಧರ್ಮದವರಲ್ಲ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.

ನಮ್ಮ ಗುರುಗಳು ಮಾನವ ಧರ್ಮ ಒಂದೇ ಎಂದು ಹೇಳಿದ್ದಾರೆ. ಸರ್ವಧರ್ಮ ಸಮನ್ವಯದ ಮೂರ್ತಿಗಳನ್ನು ನಮ್ಮ ಮಠದಲ್ಲಿ ಅಜ್ಜನವರು ಸ್ಥಾಪಿಸಿದ್ದಾರೆ ಎಂದು ಅವರು ತಿಳಿಸಿದರು.

“ಯಾರಾದರೂ ಮಠದಲ್ಲಿ ಮಹಮ್ಮದ್ ಪೈಗಂಬರ್ ಅವರ ಮೂರ್ತಿ ಸ್ಥಾಪಿಸಿರುವುದನ್ನು ನೋಡಿದ್ದೀರಾ? ನಮ್ಮ ಮಠದಲ್ಲಿ ಇದೆ. ನಾವು ಅದರ ಬಗ್ಗೆ ಮಾತಾಡಲ್ಲ. ಮುಂದೆ ಏನೇನು ಆಗಬೇಕೋ ಆಗುತ್ತದೆ” ಎಂದರು.

ದೇವರಾಜ ಅರಸು ಪ್ರಸಂಗ ನೆನಪಿಸಿದ ಶ್ರೀಗಳು

ಯಾರೂ ಸ್ಥಿರವಾಗಿರುವುದಿಲ್ಲ, ಮನುಷ್ಯ ಎಂದ ಮೇಲೆ ಹುಟ್ಟು-ಸಾವು ಇದ್ದೇ ಇರುತ್ತದೆ ಎಂದು ಹೇಳಿದ ಶ್ರೀಗಳು, ಹಿಂದೆ ದೇವರಾಜ ಅರಸು ಅವರು 11 ವರ್ಷ ಮುಖ್ಯಮಂತ್ರಿಯಾಗಿದ್ದ ಪ್ರಸಂಗವನ್ನು ನೆನಪಿಸಿಕೊಂಡರು.

1971ರಲ್ಲಿ ದೇವರಾಜ ಅರಸು ಅವರು ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಆಗ ಅಜ್ಜನವರು ಅವರಿಗೆ ಬಂಗಾರದ ರುದ್ರಾಕ್ಷಿ, ಎರಡು ವಿಭೂತಿ ಹಾಗೂ ರೇಣುಕ ದೇವಿಯ ಮೂರ್ತಿಯನ್ನು ನೀಡಿದ್ದರು ಎಂದು ಶ್ರೀಗಳು ಹೇಳಿದರು.

ರೇಣುಕ ದೇವಿಯ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ ಪೂಜೆ ಮಾಡುವಂತೆ ಅರಸು ಅವರಿಗೆ ತಿಳಿಸಲಾಗಿತ್ತು. ಅಲ್ಲದೆ, ಅವರ ಕೊರಳಿಗೆ ಮಾಲೆ ಹಾಕಿ, ಕೊರಳಿನಲ್ಲಿರುವ ಮಾಲೆಯನ್ನು ತೆಗೆಯಬಾರದು ಎಂದೂ ಅಜ್ಜನವರು ಹೇಳಿದ್ದರು ಎಂದು ವಿವರಿಸಿದರು.

ಮುಖ್ಯಮಂತ್ರಿ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಮಠದ ಆವರಣದಿಂದ ಹೊರಗಡೆ ಕಳುಹಿಸಲಾಗಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img