ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣವು ಹೋಳಿ ಹುಣ್ಣಿಮೆಯ ದಿನ ಸಂಭವಿಸುತ್ತಿದ್ದು, ಇದನ್ನು ‘ಬ್ಲಡ್ ಮೂನ್’ ಎಂದೂ ಕರೆಯಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ರಕ್ತಚಂದ್ರ ಗ್ರಹಣದಿಂದ ಜಲಕಂಟಕ, ಅಗ್ನಿಕಂಟಕಗಳ ಪರಿಣಾಮ ಕಾಣಿಸಬಹುದು ಎಂದು ಹೇಳಲಾಗುತ್ತಿದೆ. ಕೆಲ ರಾಶಿಗಳ ಮೇಲೆ, ವಿಶೇಷವಾಗಿ ಸಿಂಹ ರಾಶಿಯವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಗ್ರಹಣದ ದಿನದ ಕಾರ್ಯಕ್ರಮಗಳ ವಿವರ ಪ್ರಕಟಿಸಿದ್ದಾರೆ.
ಮಾರ್ಚ್ 3ರಂದು ರಕ್ತಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಎಂದಿನಂತೆ ಪೂಜೆ–ಪುನಸ್ಕಾರಗಳು ನಡೆಯಲಿವೆ. ಬೆಳಗ್ಗೆ 6 ಗಂಟೆಯಿಂದ ಜಲಾಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ.
ಬೆಳಗ್ಗೆ 9 ಗಂಟೆಗೆ ದರ್ಭೆಯಿಂದ ಗರ್ಭಗುಡಿ ಬಂಧನ ಮಾಡಿ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ನಂತರ ಸಂಜೆ 7:30 ಗಂಟೆಗೆ ದೇವಸ್ಥಾನವನ್ನು ಮರುತೆರೆಯಲಾಗುತ್ತದೆ. ಸ್ವಾಮಿಗೆ ಜಲಾಭಿಷೇಕ ನೆರವೇರಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.
ಗ್ರಹಣದ ಬಳಿಕ ಮರುದಿನ ಬೆಳಗ್ಗೆ ದೇವಸ್ಥಾನದಲ್ಲಿ ಶುಚಿಗೊಳಿಸುವ ಕಾರ್ಯ ನಡೆಯಲಿದೆ. ಭಕ್ತರು ಸೂಚಿಸಲಾದ ಸಮಯಕ್ಕೆ ಅನುಗುಣವಾಗಿ ದೇವಾಲಯಕ್ಕೆ ಭೇಟಿ ನೀಡುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.



