ವಾಷಿಂಗ್ಟನ್: ಭಾರತೀಯ ತೈಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಮೆರಿಕದ ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ (27.56 ಲಕ್ಷ ಕೋಟಿ ರೂ.) ವೆಚ್ಚದ ಹೊಸ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಹೊಸ ತೈಲ ಘಟಕ ತೆರೆಯಲಾಗುತ್ತಿದೆ. ಇದು ಅಮೆರಿಕದ ಇತಿಹಾಸದ ಅತಿ ದೊಡ್ಡ ತೈಲ ಹೂಡಿಕೆ ಒಪ್ಪಂದವಾಗಿದೆ. ಘಟಕದಿಂದ ಅಮೆರಿಕದ ಇಂಧನ ಉತ್ಪಾದನೆ ಹೆಚ್ಚಾಗುತ್ತದೆ, ರಾಷ್ಟ್ರೀಯ ಭದ್ರತೆ ಬಲಪಡುತ್ತದೆ ಮತ್ತು ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತದೆ.
ರಿಲಯನ್ಸ್ ಮತ್ತು ಭಾರತ ಪಾಲುದಾರರಿಗೆ ಧನ್ಯವಾದ. ತೆರಿಗೆ ಕಡಿತ ನೀತಿಗಳಿಂದ ದೇಶಕ್ಕೆ ಶತಕೋಟಿ ಡಾಲರ್‌ಗಳ ಡೀಲ್‌ಗಳು ಬರಲಿದೆ ಎಂದಿದ್ದಾರೆ ಟ್ರಂಪ್. ಈ ಘಟಕ ವಿಶ್ವದ ಅತ್ಯಂತ ಸ್ವಚ್ಛ ತೈಲ ಸಂಸ್ಕರಣಾಗಾರವಾಗಿದ್ದು, ಅಮೆರಿಕ ಮಾರುಕಟ್ಟೆಗಳಿಗೆ ಇಂಧನವನ್ನು ಪೂರೈಕೆ ಮಾಡುತ್ತದೆ ಮತ್ತು ಜಾಗತಿಕ ರಫ್ತಿಗೆ ಶಕ್ತಿ ತುಂಬಲಿದೆ.



