ಬಾಗ್ದಾದ್: ಇರಾಕ್ನ ಬಸ್ರಾ ಸಮೀಪ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಇರಾನ್ ಸೂಸೈಡ್ ಬೋಟ್ ದಾಳಿ ನಡೆಸಿದ ಪರಿಣಾಮ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಮಾರ್ಚ್ 11ರಂದು ದಾಳಿಗೊಳಗಾದ “ಸಫೇಸಿಯಾ ವಿಷ್ಣು” ಎಂಬ ಟ್ಯಾಂಕರ್ ಅಮೆರಿಕ ಮೂಲದ ಸಫೇಸಿಯಾ ಟ್ರಾನ್ಸ್ಪೋರ್ಟ್ ಇಂಕ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.
ದಾಳಿಯ ಸಂದರ್ಭದಲ್ಲಿ ಹಡಗಿನಲ್ಲಿ ಇದ್ದ ಉಳಿದ 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಾಗ್ದಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಕ್ಷಿಸಲ್ಪಟ್ಟ ನಾವಿಕರೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕ್ ಕರಾವಳಿ ಬಳಿ ನಡೆದ ಈ ದಾಳಿಯಲ್ಲಿ ಎರಡು ತೈಲ ಟ್ಯಾಂಕರ್ಗಳನ್ನು ಧ್ವಂಸ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಕನಿಷ್ಠ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಇದಲ್ಲದೆ ಯುಎಇ ಕರಾವಳಿಯಲ್ಲಿ ಒಂದು ಹಡಗಿನ ಮೇಲೆ ದಾಳಿ ನಡೆದಿದ್ದು, ಒಮಾನ್ ಉತ್ತರ ಭಾಗದ ಸಮೀಪ ಮತ್ತೊಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುಬೈ ವಾಯುವ್ಯ ಭಾಗದಲ್ಲೂ ಮತ್ತೊಂದು ಹಡಗು ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಈ ಮೊದಲು ಎಚ್ಚರಿಕೆ ನೀಡಿತ್ತು. ಈ ಬೆದರಿಕೆಯ ನಡುವೆಯೂ ಆ ಮಾರ್ಗದಲ್ಲಿ ಸೀಮಿತ ಪ್ರಮಾಣದ ಹಡಗು ಸಂಚಾರ ಮುಂದುವರೆದಿದೆ.



