ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದ್ದು, ಒಟ್ಟು 39 ಮಂದಿಗೆ ಸೀಟು ದೊರೆತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಈ ಸುತ್ತಿನ ಸೀಟು ಹಂಚಿಕೆಯ ನಂತರವೂ ಇನ್ನೂ 744 ಸೀಟುಗಳು ಖಾಲಿ ಉಳಿದಿವೆ ಎಂದು ವಿವರಿಸಿದ್ದಾರೆ. ಇದುವರೆಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಕೋರ್ಸ್ ಶುಲ್ಕದ ಡಿಡಿ ಅಥವಾ ಚೆಕ್ ಸಲ್ಲಿಸಿ ಆಪ್ಷನ್ ದಾಖಲಿಸಲು ಇಂದು ಇಡೀ ದಿನ ಅವಕಾಶ ನೀಡಲಾಗಿತ್ತು. ಒಟ್ಟು 55 ಮಂದಿ ಡಿಡಿ ಅಥವಾ ಚೆಕ್ ಸಲ್ಲಿಸಿದ್ದರು.
ಆದರೆ ಅವರಲ್ಲಿ 41 ಮಂದಿ ಮಾತ್ರ ಆಪ್ಷನ್ ದಾಖಲಿಸಿದ್ದರಿಂದ ಅವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೀಟು ಪಡೆದ ಅಭ್ಯರ್ಥಿಗಳು ಮಾರ್ಚ್ 12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



