ಚಾಮರಾಜನಗರ: ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣಗಳು ದಿನೇ ದಿನೇ ಮತ್ತೆ ಹೆಚ್ಚಾಗಿವೆ. ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿರುವ ಬಸವೇಶ್ವರ ಹಾಗೂ ಮಾರಮ್ಮ ದೇವಸ್ಥಾನಗಳ ಬಾಗಿಲುಗಳನ್ನು ಮುರಿದು ಕಳ್ಳರು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.
ತಡರಾತ್ರಿ ನಡೆದ ಈ ಕಳ್ಳತನದಲ್ಲಿ ಸುಮಾರು 4 ಕೆ.ಜಿ ಬೆಳ್ಳಿ ಹಾಗೂ 30 ಗ್ರಾಂ ಚಿನ್ನಾಭರಣ ಕಳ್ಳರ ಕೈಗೆ ಸಿಕ್ಕಿದ್ದು, ಬಳಿಕ ಅವರು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ಮೊದಲು ಸಿಸಿಟಿವಿ ಕ್ಯಾಮೆರಾದ ಹಾರ್ಡಿಸ್ಕ್ ತೆಗೆದುಕೊಂಡು ಹೋಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನ ನಡೆದ ಘಟನೆ ಇನ್ನೂ ಮಾಸುವ ಮುನ್ನವೇ ಮತ್ತೆ ಕಳ್ಳರು ಕೈಚಳಕ ತೋರಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದೀಗ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ಪರಿಶೀಲನೆ ಮುಂದುವರಿದಿದೆ.



