ಬಳ್ಳಾರಿ: ಭೀಕರ ರಸ್ತೆ ಅಪಘಾತದಲ್ಲಿ ಅಜ್ಜ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು, ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಕರ್ನಾರಹಟ್ಟಿ ಗ್ರಾಮದ ಈಶ್ವರಪ್ಪ (55) ಮತ್ತು ಅವರ ಮೊಮ್ಮಗಳು ಸೃಷ್ಟಿ (14) ಮೃತ ದುರ್ದೈವಿಗಳಾಗಿದ್ದಾರೆ.
ಸೃಷ್ಟಿ ಕೂಡ್ಲಿಗಿ ಪಟ್ಟಣದ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿದ ಬಳಿಕ ತಾತನೊಂದಿಗೆ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದಳು.
ಘಟನೆಯ ವೇಳೆ ಹೆದ್ದಾರಿಯಲ್ಲಿ ರೈತರು ರಾಗಿ ಒಣಗಿಸಲು ಹಾಕಿದ್ದ ಕಾರಣ ಬೈಕ್ ಸ್ಕಿಡ್ ಆಗಿದೆ. ಬೈಕ್ ಕೆಳಗೆ ಬಿದ್ದಿದ್ದು, ಹಿಂಬದಿಯಿಂದ ಬರುತ್ತಿದ್ದ ಲಾರಿ ಹರಿದು ತಾತ ಮತ್ತು ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಮತ್ತು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಗಿದೆ.



