ಗಾಂಧಿನಗರ: ಗುಜರಾತ್ನಲ್ಲಿ ಎಲ್ಪಿಜಿ ಕೊರತೆಯ ನಡುವೆಯೇ ಮಹತ್ವದ ಬೆಳವಣಿಗೆಯಾಗಿದ್ದು, 46,000 ಟನ್ ಎಲ್ಪಿಜಿ ಹೊತ್ತ ನಂದಾ ದೇವಿ ಹಡಗು ಕೆಲವೇ ಗಂಟೆಗಳಲ್ಲಿ ಕಾಂಡ್ಲಾ ಬಂದರು ತಲುಪಲಿದೆ. ಇದರಿಂದ ದೇಶದಲ್ಲಿ ತಲೆದೂರಿದ್ದ ಅಡುಗೆ ಅನಿಲದ ಕೊರತೆ ಸಮಸ್ಯೆಗೆ ಭಾಗಶಃ ಪರಿಹಾರ ಸಿಗಲಿದೆ.
ಇದಕ್ಕೂ ಮೊದಲು, ಸೋಮವಾರ (ಮಾ.16) 46,000 ಟನ್ ಎಲ್ಪಿಜಿ ಹೊತ್ತ ಶಿವಾಲಿಕ್ ಹಡಗು ಭಾರತಕ್ಕೆ ಆಗಮಿಸಿತ್ತು. ಈ ಎರಡೂ ಹಡಗುಗಳು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಸೇರಿವೆ. ಪ್ರತಿಯೊಂದು ಹಡಗು ಕೂಡ ತಲಾ 46,000 ಟನ್ ಎಲ್ಪಿಜಿ ಸಾಗಣೆ ಮಾಡುತ್ತಿದೆ. ಇದರ ಜೊತೆಗೆ ಮೂರನೇ ಹಡಗು ಕೂಡ ಇಂದು ಭಾರತ ತಲುಪುವ ನಿರೀಕ್ಷೆಯಿದೆ.
ಇನ್ನೊಂದೆಡೆ, ಯುಎಇಯ ಫುಜೈರಾ ಬಂದರಿನಿಂದ ಹೊರಟಿದ್ದ ಜಗ್ ಲಡ್ಕಿ ಹಡಗು ಇಂದು ಮಧ್ಯಾಹ್ನ ಮುಂದ್ರಾ ಬಂದರು ತಲುಪುವ ಸಾಧ್ಯತೆ ಇದೆ. ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತು ಬರುತ್ತಿದೆ.
ಶಿವಾಲಿಕ್ ಹಡಗು ಮುಂದ್ರಾ ಬಂದರಿನಲ್ಲಿ 20,000 ಟನ್ ಎಲ್ಪಿಜಿಯನ್ನು ಇಳಿಸಲಿದ್ದು, ಉಳಿದ 26,000 ಟನ್ ಅನ್ನು ನವ ಮಂಗಳೂರು ಬಂದರುಗೆ ಸಾಗಿಸಲಾಗುತ್ತದೆ. ಇದರಿಂದ ಕರ್ನಾಟಕಕ್ಕೆ 26,000 ಟನ್ ಎಲ್ಪಿಜಿ ಪೂರೈಕೆ ಆಗಲಿದೆ.
ಒಟ್ಟಾರೆ, ಈ ಹಡಗುಗಳ ಆಗಮನದಿಂದ ದೇಶದಲ್ಲಿನ ಎಲ್ಪಿಜಿ ಪೂರೈಕೆ ಸ್ಥಿರಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.



