ತುಮಕೂರು: ಬಸ್ ಹತ್ತಲು ಯತ್ನಿಸಿದ ವೇಳೆ ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ ಟೈರ್ ಹರಿದು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಹರ್ಷಿತ (17) ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಪ್ಯಾರಾಮೆಡಿಕಲ್ ಅಭ್ಯಾಸ ಮಾಡುತ್ತಿದ್ದಾಳೆ. ತುಮಕೂರಿನಿಂದ ಮಧುಗಿರಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೂಕಾಟ-ತಳ್ಳಾಟ ಉಂಟಾಗಿ ಈ ಅವಘಡ ಸಂಭವಿಸಿದೆ.
ಈ ವೇಳೆ ಬಸ್ ಟೈರ್ ಹರ್ಷಿತಾಳ ಕಾಲಿನ ಮೇಲೆ ಹರಿದ ಪರಿಣಾಮ ಕಾಲು ಮುರಿದಿದೆ. ತಕ್ಷಣವೇ ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹರ್ಷಿತ ತುಮಕೂರಿನ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.



