ಬೆಂಗಳೂರು: ಪೀಣ್ಯದ ಹೆಚ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ವಿಚಾರವಾಗಿ ಉಂಟಾದ ಜಗಳದ ವೇಳೆ ಅಕ್ಕ ಮತ್ತು ತಮ್ಮನನ್ನು ಹತ್ಯೆ ಮಾಡಲಾಗಿದೆ.
ಯಮುನಾ (36) ಹಾಗೂ ಸುದೀಪ್ (34) ಮೃತರು ಎಂದು ಗುರುತಿಸಲಾಗಿದೆ. ಘಟನೆ ಸ್ಥಳಕ್ಕೆ ಡಿಸಿಪಿ ನಾಗೇಶ್ ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆರೋಪಿಯ ತಾಯಿ ಛಾಯಾ ಮತ್ತು ಯಮುನಾ ಅವರ ಪತಿಯ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಹಿನ್ನೆಲೆ, ಈ ವಿಚಾರವನ್ನು ಪ್ರಶ್ನಿಸಲು ಯಮುನಾ ಮತ್ತು ತಮ್ಮ ಸುದೀಪ್ ಛಾಯಾ ಮನೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿಯಿಂದ ಜಗಳ ಉಂಟಾಗಿದೆ.
ಜಗಳದ ಮಧ್ಯೆ ಪ್ರವೇಶಿಸಿದ ಛಾಯಾ ಪುತ್ರ, ಚಾಕುವಿನಿಂದ ಹತ್ತಾರು ಬಾರಿ ಇರಿದು ಇಬ್ಬರನ್ನೂ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.



