ಪಾಟ್ನಾ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಕುಮಾರ್ ಸಿಂಗ್ ಅವರಿಗೆ ರಾತ್ರಿ ಊಟದ ವೇಳೆ ನೀಡಿದ ಮೊಸರಿನಲ್ಲಿ ಜೀವಂತ ಹುಳುಗಳು ಕಂಡುಬಂದಿವೆ. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣವೇ ರೈಲು ಸಿಬ್ಬಂದಿಯನ್ನು ಪ್ರಶ್ನಿಸಿದರೂ, ಸಿಬ್ಬಂದಿ ಅದನ್ನು ನಿರಾಕರಿಸಿ ‘ಕೇಸರಿ’ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ
ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ನಂತರ ನಡೆದ ಪರಿಶೀಲನೆಯಲ್ಲಿ ಆ ಮೊಸರು ಅವಧಿ ಮೀರಿರುವುದೂ ಪತ್ತೆಯಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಚಿವಾಲಯ, ಆಹಾರದ ಗುಣಮಟ್ಟದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ, ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿ, ಅದರ ಒಪ್ಪಂದವನ್ನು ತಕ್ಷಣದಿಂದಲೇ ರದ್ದುಪಡಿಸಲು ಆದೇಶಿಸಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ರೈಲ್ವೆ ಇಲಾಖೆ ಪುನರುಚ್ಚರಿಸಿದೆ.



