ಚಿಕ್ಕಮಗಳೂರು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಹಿನ್ನೆಲೆ ಮನನೊಂದು ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ ತಾಲೂಕಿನ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಉಷಾ (45) ಮೃತ ಮಹಿಳೆ. ಕಿರುಕುಳ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮಾಡಿ ಅವರು ನೇಣಿಗೆ ಶರಣಾಗಿದ್ದಾರೆ. ವಿಡಿಯೋದಲ್ಲಿ, ಲೆಕ್ಕಪತ್ರ ಪುಸ್ತಕ ಕಳೆದುಹೋಗಿರುವುದು ತನ್ನಿಂದಾದ ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಹಣ ದುರುಪಯೋಗ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ನಡೆದಿದ್ದ ಪಂಚಾಯತಿಯಲ್ಲೂ ಲೆಕ್ಕಪತ್ರ ಮಿಸ್ಸಿಂಗ್ ಆಗಿರೋದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು ಎನ್ನಲಾಗಿದೆ. 2010ರಲ್ಲಿ ಸ್ಥಾಪನೆಯಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಆರಂಭದಿಂದಲೂ ಉಷಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಹಳೆಯ ಲೆಕ್ಕಪತ್ರಗಳನ್ನು ಕೇಳಲು ಪ್ರಾರಂಭಿಸಿದ್ದು, ಈ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮೃತಳ ಪತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿಯ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಉಷಾ ಎಲ್ಲಾ ಲೆಕ್ಕಪತ್ರಗಳನ್ನು ನೀಡಿದ್ದರೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋದಲ್ಲಿ 10 ಜನರ ಹೆಸರುಗಳನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಹೆಚ್. ಮಲ್ಲೇನಹಳ್ಳಿ ಗ್ರಾಮದ 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



