ನವದೆಹಲಿ/ಹುಬ್ಬಳ್ಳಿ: ಜಾಗತಿಕ ಬಿಕ್ಕಟ್ಟು ಮತ್ತು ಸವಾಲಿನ ನಡುವೆಯೂ ಕೇಂದ್ರ ಸರ್ಕಾರ ಕೈಗಾರಿಕಾ ವಲಯಕ್ಕೆ ನೆರವಾಗುವ ಉದ್ದೇಶದಿಂದ ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಶೇ.70ರಷ್ಟು ಹೆಚ್ಚಿಸಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.10ರಷ್ಟು ಕಡಿತಗೊಳಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಯುದ್ಧದ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಇಂಧನ ಪೂರೈಕೆ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ, ಭಾರತದ ಕೈಗಾರಿಕೆಗಳು ಅಡಚಣೆ ಇಲ್ಲದೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆ ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಹಾಗೂ ವಾಣಿಜ್ಯ ಎಲ್ಪಿಜಿ ಹಂಚಿಕೆ ಹೆಚ್ಚಿಸುವ ಮೂಲಕ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಕೋವಿಡ್ ಕಾಲದಂತೆ ಲಾಕ್ಡೌನ್ ಜಾರಿಯಾಗಬಹುದು ಎಂಬ ವದಂತಿಗಳನ್ನು ತಳ್ಳಿಹಾಕಿದ ಸಚಿವರು, ಇಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಜನರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಮತ್ತು ಆತಂಕಪಡಬಾರದು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಈ ಕ್ರಮದಿಂದ ಉಕ್ಕು, ಆಟೋಮೊಬೈಲ್ ಮತ್ತು ಜವಳಿ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



