ಹಾಸನ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಈ ಬಾರಿ ಭರ್ಜರಿ ದಾಖಲೆ ನಿರ್ಮಿಸಿದೆ.

ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸಿದ್ದು, ಕೇವಲ 12 ದಿನಗಳಲ್ಲಿ ಬರೋಬ್ಬರಿ 30,06,000 ಮಂದಿ ದರ್ಶನ ಪಡೆದಿದ್ದಾರೆ. ಭಕ್ತರು ಸಲ್ಲಿಸಿದ ಕಾಣಿಕೆ ಹಾಗೂ ವಿವಿಧ ಮೂಲಗಳಿಂದ ದೇವಾಲಯಕ್ಕೆ ಒಟ್ಟು ₹29,55,27,852 ಆದಾಯ ಸಂಗ್ರಹವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ₹4 ಕೋಟಿ ಹೆಚ್ಚುವರಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 29ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಂದು ಸಾರ್ವಜನಿಕ ದರ್ಶನಕ್ಕೆ ಅಧಿಕೃತ ಅವಕಾಶವಿರದಿದ್ದರೂ, ನೆರೆದಿದ್ದ 5,600 ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನಗಳ ಕಾಲ ರಾಜ್ಯ, ದೇಶ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
1,000 ಟಿಕೆಟ್ ಮಾರಾಟದಿಂದಲೇ 16.98 ಕೋಟಿ ಆದಾಯ!
ಈ ಬಾರಿ ವಿಶೇಷ ದರ್ಶನದ ಟಿಕೆಟ್ ಮಾರಾಟದಿಂದ ದೇವಾಲಯಕ್ಕೆ ದೊಡ್ಡ ಪ್ರಮಾಣದ ಆದಾಯ ಬಂದಿದೆ. ಅದರ ವಿವರ ಹೀಗಿದೆ.
- ₹1,000 ವಿಶೇಷ ದರ್ಶನ ಟಿಕೆಟ್ – ₹16,98,11,257
- ₹300 ವಿಶೇಷ ದರ್ಶನ ಟಿಕೆಟ್ – ₹7,24,14,000
- ಲಾಡು ಪ್ರಸಾದ ಮಾರಾಟ – ₹1,35,99,156
- ದೇಣಿಗೆ – ₹5,91,228
- ಇ-ಹುಂಡಿ – ₹13,13,264
- ಜಾಹೀರಾತು – ₹5,74,000
ಈ ಎಲ್ಲ ಮೂಲಗಳಿಂದ ಒಟ್ಟು ₹25,82,88,199 ಸಂಗ್ರಹವಾಗಿದೆ. ಇನ್ನು ದೇವಿಯ ಹುಂಡಿಗೆ ಭಕ್ತರು ₹3,71,63,933 ಕಾಣಿಕೆ ಸಲ್ಲಿಸಿದ್ದಾರೆ. ಇದರಿಂದ ಒಟ್ಟಾರೆ ಆದಾಯ ₹29.55 ಕೋಟಿಗೂ ಅಧಿಕವಾಗಿದೆ.
ಹುಂಡಿಯಲ್ಲಿ ಚಿನ್ನ, ಬೆಳ್ಳಿ ಜೊತೆಗೆ ವಿದೇಶಿ ಕರೆನ್ಸಿ!
ಹಾಸನಾಂಬ ದೇವಿಗೆ ಭಕ್ತರು 43.170 ಗ್ರಾಂ ಚಿನ್ನ ಹಾಗೂ 1.255 ಕೆ.ಜಿ. ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಹುಂಡಿ ಎಣಿಕೆ ವೇಳೆ ಸಿಂಗಾಪುರ, ಓಮನ್, ಬಹ್ರೇನ್, ಅಮೆರಿಕ, ಯುಎಇ ಹಾಗೂ ಚೀನಾ ಸೇರಿದಂತೆ ವಿವಿಧ ದೇಶಗಳ ಕರೆನ್ಸಿಗಳು ಪತ್ತೆಯಾಗಿವೆ. ಇದರ ಜೊತೆಗೆ ಹಳೆಯ ₹500 ಮತ್ತು ₹1,000 ಮುಖಬೆಲೆಯ ನೋಟುಗಳು ಹಾಗೂ ನಕಲಿ ನೋಟುಗಳೂ ಪತ್ತೆಯಾಗಿವೆ.
500ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹುಂಡಿ ಎಣಿಕೆ:
ದೇವಾಲಯದ ಸಮೀಪದ ತೇರಾಪಂಥ್ ಭವನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಕಂದಾಯ ಇಲಾಖೆಯ 500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 50 ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇನ್ನು ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಾವಿರಾರು ಪತ್ರಗಳನ್ನು ಹುಂಡಿಯಲ್ಲಿ ಹಾಕಿದ್ದರು. ಆದರೆ ಜಿಲ್ಲಾಡಳಿತದ ಸೂಚನೆಯಂತೆ ಈ ಪತ್ರಗಳನ್ನು ತೆರೆದು ಓದುವುದನ್ನು ನಿಷೇಧಿಸಲಾಗಿತ್ತು. ಮತ್ತೊಂದೆಡೆ, ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ ₹18,99,100 ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.










