ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸುಲಭವಾಗಿ ಮಣಿಸಿದ RCB ಗೆಲುವಿನ ಶುಭಾರಂಭ ಮಾಡಿದೆ.
ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದ ಎಸ್ಆರ್ಹೆಚ್ ತಂಡವನ್ನು ಮಕಾಡೆ ಮಲಗಿಸಿದ ಆರ್ಸಿಬಿ ಕೇವಲ 15.4 ಓವರ್ಗಳಲ್ಲಿ 202 ರನ್ ಬೆನ್ನಟ್ಟಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 201 ರನ್ ಕಲೆಹಾಕಿತು. ಗೆಲುವಿಗೆ 202 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಆರ್ಸಿಬಿ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು.
ಪಂದ್ಯದಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು. ಈ 69 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಶೊಯೆಬ್ ಮಲಿಕ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕೇವಲ 398 ಟಿ20 ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.



