ದೇವನಹಳ್ಳಿ: ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮಾರ್ಚ್ 28ರ ಶನಿವಾರ, ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ.
ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ.



