ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್‌ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಹೆಸರಿನಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
“ಆಫ್ ರೇಟ್”, “ಚೀಪ್ ರೇಟ್” ಎಂದು ಗ್ರಾಹಕರನ್ನು ಆಕರ್ಷಿಸಿ, ಸಾವಿರಾರು ರೂಪಾಯಿ ಮೌಲ್ಯದ ವಾಚ್‌ಗಳನ್ನು ಅರ್ಧ ಬೆಲೆಯಲ್ಲಿ ನೀಡುವ ಮೂಲಕ ಮೋಸ ಮಾಡಲಾಗುತ್ತಿತ್ತು. ಉದಾಹರಣೆಗೆ ₹5,000 ಮೌಲ್ಯದ ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಹೇಳಿ ನಕಲಿ ವಾಚ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಈ ಪ್ರಕರಣ ಸಂಬಂಧ ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಹಾಗೂ ಅಬ್ದುಲ್ ರೆಹಮಾನ್ ಎಂಬ ಐವರನ್ನು ಬಂಧಿಸಲಾಗಿದೆ.
ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳವು ಸುಮಾರು ₹25 ಲಕ್ಷ ಮೌಲ್ಯದ 670 ನಕಲಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ಆರ್.ಟಿ. ನಗರ ಹಾಗೂ ಚಿಕ್ಕಪೇಟೆ ಪ್ರದೇಶಗಳ ಅಂಗಡಿಗಳಲ್ಲಿ ಈ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಬ್ರಾಂಡೆಡ್ ವಾಚ್ ಕಂಪನಿಯಾದ ಟೈಟನ್ ತನ್ನ ಉತ್ಪನ್ನಗಳನ್ನು ನಕಲು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಸಿಸಿಬಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಕಲಿ ವಾಚ್‌ಗಳನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಮತ್ತು ಇನ್ನೂ ಯಾರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



