ಮಾಸ್ಕೋ/ದೆಹಲಿ: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದ ಇಂಧನ ಪೂರೈಕೆ ತೀವ್ರ ಒತ್ತಡಕ್ಕೆ ಸಿಲುಕಿರುವ ಹಿನ್ನೆಲೆ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ.
ಈಗಾಗಲೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಇರದಂತೆ ನೋಡಿಕೊಳ್ಳಲು ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ರಷ್ಯಾದಿಂದ ಖರೀದಿಸಿದೆ.
ರಷ್ಯಾ ಸರ್ಕಾರ ಭಾರತಕ್ಕೆ ಬೇಕಾದ ತೈಲ ಮತ್ತು ಎಲ್‌ಎನ್‌ಜಿ (LNG) ಪೂರೈಕೆಗೆ ಉತ್ಪಾದನೆ ಹೆಚ್ಚಿಸಲು ಸಿದ್ಧ ಎಂದು ಭರವಸೆ ನೀಡಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಇಂಧನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದರಿಂದ, ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸಬಹುದು ಎಂದು ಮಾಸ್ಕೋ ತಿಳಿಸಿದೆ.
ಭಾರತಕ್ಕೆ ಅಧಿಕೃತ ಭೇಟಿ ನೀಡಿದ ರಷ್ಯಾದ ಉಪಾಧ್ಯಕ್ಷ ಡೆನಿಸ್ ಮಾಂಟುರೊವ್ ಅವರು ಮಾತನಾಡಿ, “ಭಾರತದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಷ್ಯಾದ ಕಂಪನಿಗಳು ಇಂಧನ ರಫ್ತುಗಳನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ.” 2025 ರ ಅಂತ್ಯದ ವೇಳೆಗೆ ರಷ್ಯಾ ಭಾರತಕ್ಕೆ ಖನಿಜ ರಸಗೊಬ್ಬರ ಪೂರೈಕೆಯನ್ನು ಶೇ.40ರಷ್ಟು ಹೆಚ್ಚಿಸಿವೆ, ಹಾಗೂ ಭಾರತದ ಅಗತ್ಯವನ್ನು ಪೂರೈಸಲು ಮಾಸ್ಕೋ ಸಿದ್ಧವಾಗಿದೆ ಎಂದು ಮಾಂಟುರೊವ್ ತಿಳಿಸಿದ್ದಾರೆ.



