ಬೆಂಗಳೂರು: ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರ ವಿರುದ್ಧ ಬೆಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 272 ಜನರನ್ನು ಗಡಿಪಾರು ಮಾಡಲಾಗಿದೆ. ಗಡಿಪಾರು ಮಾಡಲ್ಪಟ್ಟವರಲ್ಲಿ 178 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳು ಸೇರಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ದೇಶಾದ್ಯಂತ ನಡೆದ ಕಾರ್ಯಾಚರಣೆಯ ಭಾಗವಾಗಿ, ಬೆಂಗಳೂರಿನಲ್ಲಿ ನೆಲೆಸಿದ್ದ ಅಕ್ರಮ ವಲಸಿಗರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣದ ತನಿಖೆಯಲ್ಲಿ, ವಲಸಿಗರನ್ನು ಭಾರತಕ್ಕೆ ತರಲು ಕಾರ್ಯನಿರ್ವಹಿಸುತ್ತಿದ್ದ “ಟೇಕೆದಾರ್” ಎಂಬ ಮಧ್ಯವರ್ತಿಗಳ ಜಾಲ ಬಯಲಾಗಿದೆ. ಇವರು ಗಡಿದಾಟಿಸುವುದು ಹಾಗೂ ಕೆಲಸ ಒದಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ.
ಮಾಹಿತಿಯ ಪ್ರಕಾರ, ಮೂವರು ಟೇಕೆದಾರ್ ರ ಸರಪಳಿಯ ಮೂಲಕ ವಲಸಿಗರನ್ನು ಭಾರತಕ್ಕೆ ತರಲಾಗುತ್ತಿತ್ತು. ಒಬ್ಬನು ಬಾಂಗ್ಲಾದೇಶದಿಂದ ಗಡಿಯವರೆಗೆ ಕರೆತರುತ್ತಿದ್ದರೆ, ಮತ್ತೊಬ್ಬನು ಗಡಿಯನ್ನು ದಾಟಿಸಿ ಒಳಗೆ ತರುತ್ತಿದ್ದ. ಮೂರನೇ ವ್ಯಕ್ತಿ ಭಾರತದಲ್ಲಿ ಉದ್ಯೋಗ ವ್ಯವಸ್ಥೆ ಮಾಡುತ್ತಿದ್ದ.
ಈ ಸಂಬಂಧ ಬೆಂಗಳೂರಿನಲ್ಲಿ ಇಬ್ಬರು ಮಧ್ಯವರ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಾಂಗ್ಲಾದೇಶ ಮೂಲದ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಗುರುತಿಸಲ್ಪಟ್ಟ ವಲಸಿಗರನ್ನು ತ್ರಿಪುರಾ ಗಡಿಯ ಮೂಲಕ ಗಡಿ ಭದ್ರತಾ ಪಡೆ ಸಹಾಯದಿಂದ ತಮ್ಮ ದೇಶಕ್ಕೆ ಹಿಂತಿರುಗಿಸಲಾಗಿದೆ.



