ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ 9 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ಘಟನೆ ತಾಲೂಕಿನ ಕೊತ್ತನೂರು ಗ್ರಾಮದ ಬಳಿ ನಡೆದಿದೆ.
ಮೃತ ಬಾಲಕಿಯನ್ನು ಅಂಕಿತಾ (9) ಎಂದು ಗುರುತಿಸಲಾಗಿದೆ. ಆಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ರಾಜೇಂದ್ರ ಮತ್ತು ಭಾಗ್ಯಮ್ಮ ದಂಪತಿಯ ಪುತ್ರಿಯಾಗಿದ್ದು, ಕುಟುಂಬವು ಹೊಸಕೋಟೆಯಲ್ಲಿ ವಾಸವಾಗಿತ್ತು.
ಭಾಗ್ಯಮ್ಮ ಅವರ ಸಂಬಂಧಿಕ ಮಹೇಶ್ ಅವರಿಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಜಾತ್ರೆಗೆ ತೆರಳಿ, ಮಕ್ಕಳೊಂದಿಗೆ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಲಾರಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ವೇಳೆ ಅಂಕಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



