ಹುಬ್ಬಳ್ಳಿ: ನಗರದಲ್ಲಿ ಒಂದರ ಹಿಂದೆ ಮತ್ತೊಂದು ಶಾಕ್ ನೀಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಜಿಮ್ ಟ್ರೈನರ್ ಪ್ರಕರಣದ ಬೆನ್ನಲ್ಲೇ, ಇದೀಗ ಯುವತಿಯನ್ನು ಪ್ರೀತಿಯ ನಾಟಕದಲ್ಲಿ ಸೆರೆಹಿಡಿದು, ವಿಡಿಯೋ ಮೂಲಕ ಬ್ಲ್ಯಾಕ್ಮೇಲ್ ಮಾಡಿ ವರ್ಷಗಳ ಕಾಲ ದೌರ್ಜನ್ಯ ಎಸಗಿದ ಆರೋಪ ಸ್ಫೋಟವಾಗಿದೆ.
ಮುಫೀಸ್ ಮಿಯಾನ್ನವರ್ ಎಂಬಾತ, ಕಾಲೇಜು ದಿನಗಳಲ್ಲೇ ಯುವತಿಗೆ ಪರಿಚಯವಾಗಿ, ಸ್ನೇಹವನ್ನು ಪ್ರೀತಿಯಾಗಿ ತೋರಿಸಿ ಆಕೆಯನ್ನು ನಂಬಿಸಿದ್ದಾನೆ. ನಂತರ ಗದಗ ರಸ್ತೆಯ ಬಳಿ ಕರೆದುಕೊಂಡು ಹೋಗಿ, ಯುವತಿಯ ವಿರೋಧದ ನಡುವೆಯೇ ಅತ್ಯಾಚಾರ ಎಸಗಿ, ಅದನ್ನು ವಿಡಿಯೋ ಮಾಡಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಡಿಯೋವನ್ನು ಬಳಸಿಕೊಂಡು, “ಯಾರಿಗಾದರೂ ಹೇಳಿದರೆ ಜೀವ ಸಮೇತ ಬಿಡುವುದಿಲ್ಲ” ಎಂದು ಬೆದರಿಸಿ, ಹಲವು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಇದರಷ್ಟೇ ಅಲ್ಲ, 2025ರಲ್ಲಿ ಬ್ಲ್ಯಾಕ್ಮೇಲ್ ಮಾಡಿ ಮದುವೆಗೆ ಒತ್ತಾಯಿಸಿದ ಘಟನೆ ಕೂಡ ನಡೆದಿದೆ. ಕುಟುಂಬದವರು ತಡೆದರೂ, ಆರೋಪಿ ಮನೆಗೂ ಬರುತ್ತಿದ್ದನು. ಇತ್ತೀಚೆಗೆ ಮನೆ ಖಾಲಿ ಇರುವ ಸಮಯದಲ್ಲಿ ಮತ್ತೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಬೆಳಕಿಗೆ ಬಂದ ಮತ್ತೊಂದು ಪ್ರಕರಣದಿಂದ ಧೈರ್ಯಗೊಂಡ ಯುವತಿ, ಈಗ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



