ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ನೇಟಿವ್ ಕ್ರಿಯೇಷನ್ಸ್ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ ಹಾಗೂ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಪಂಚಾಯಿತಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗಿದೆ.
ಹುಬ್ಬಳ್ಳಿ, ಶಿವಳ್ಳಿ, ಹೆಬಸೂರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದ ಕಥೆ ಉತ್ತರ ಕರ್ನಾಟಕದ ಹಾಲಳ್ಳಿ ಎಂಬ ಗ್ರಾಮದ ಗ್ರಾಮ ಪಂಚಾಯಿತಿ ಚುನಾವಣೆಯ ಸುತ್ತ ಹೆಣೆದಿದೆ. ಪಂಚಾಯಿತಿ ಅಧ್ಯಕ್ಷರ ಹಠಾತ್ ನಿಧನದಿಂದ ಆರಂಭವಾಗುವ ಸಂಘರ್ಷ ಕ್ರಮೇಣ ಇಡೀ ಗ್ರಾಮದ ರಾಜಕೀಯ ಸ್ವರೂಪವನ್ನೇ ಬದಲಿಸುವ ಕಥಾವಸ್ತುವನ್ನು ಹೊಂದಿದೆ.
ಚುನಾವಣಾ ಕಣಕ್ಕೆ ಸ್ಥಳೀಯ ಶಾಸಕರ ಪ್ರವೇಶ, ಹಣದ ಪ್ರಭಾವ, ಜಾತಿ ಹಾಗೂ ಸಾಮಾಜಿಕ ಸಮೀಕರಣಗಳು ಮತ್ತು ಸ್ಥಳೀಯ ಅಸಮಾಧಾನಗಳು ಕಥೆಯಲ್ಲಿ ಪ್ರಮುಖವಾಗಿ ಮೂಡಿಬರಲಿವೆ. ಚಿತ್ರದ ಪ್ರಮುಖ ಪಾತ್ರವಾದ ‘ಪಾಟೀಲ’ ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದೆ.
ಚಿತ್ರದ ಕಥೆಯನ್ನು ಅರವಿಂದ ಮಿತ್ರ ಬರೆದಿದ್ದು, ಪಿ. ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ಕಾಶಿ ಛಾಯಾಗ್ರಹಣ ಹಾಗೂ ಕೆಂಪರಾಜ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.
ಚಿತ್ರದಲ್ಲಿ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಗೋಕುಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ ಹಾಗೂ ಬಸವರಾಜ್ ತಿರ್ಲಾಪುರ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.
ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ ಹಾಗೂ ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ದೊಡ್ಡ ನಾಗಯ್ಯ ಬಂಡವಾಳ ಹೂಡಿದ್ದಾರೆ.



