ಬೆಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಹತಾಶವಾದ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುವ ರೀತಿ ಇದೆ. ಖರ್ಗೆ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಯೋಗ್ಯ ಚಿಕಿತ್ಸೆ ಕೊಡಿಸಿ. ರಾಜಕೀಯ ನಿವೃತ್ತಿ ಕೊಡಿಸಿ ಎಂದು ಮಾಜಿ ಸಚಿವ ಸಿ ಟಿ ರವಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ಅವರು ಆರು ದಶಕಗಳ ಕಾಲ ರಾಜಕಾರಣದಲ್ಲಿ ಹಲವಾರು ಹುದ್ದೆಗಳನ್ನು ಅನುಭವಿಸಿ ಇಂತಹ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಹಿರಿತನದ ಹಾಗೂ ಮುತ್ಸದ್ಧಿತನದ ಹೇಳಿಕೆಗಳಾಗಿ ಕಾಣುತ್ತಿಲ್ಲ. ಇದೊಂದು ದ್ವೇಷದ ಹೇಳಿಕೆ ಎಂದರು.
ಗುಜರಾತ್ ಜನ ಅನಕ್ಷರಸ್ಥರಾಗಿರುವುದರಿಂದ ಬಿಜೆಪಿ ಗೆಲ್ಲಿಸಿದರು ಎಂದು ಖರ್ಗೆ ಅವರು ಹೇಳಿದರು. ಹೀಗೆ ಹೇಳಿ ಗುಜರಾತ್ ಜನರನ್ನು ಅವಮಾನಿಸಿದರು. ಕರ್ನಾಟಕದಲ್ಲಿ ನಿರಂತರವಾಗಿ ಲೋಕಸಭೆಗೆ ಬಿಜೆಪಿಯನ್ನು ಜನ ಬೆಂಬಲಿಸುತ್ತಿದ್ದಾರೆ, ಹಾಗಾದರೆ ಕರ್ನಾಟಕದ ಜನರೂ ಅನಕ್ಷರಸ್ಥರೇ ಎಂದು ಪ್ರಶ್ನಿಸಿದರು.
ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿಷಸರ್ಪಕ್ಕೆ ಹೋಲಿಸಿದ್ದೀರಿ. ಮುಂದೆ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿದ್ದೀರಿ. ಈ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನೀವು ವರ್ತಿಸಿದ್ದೀರಿ.
ಮಹಾತ್ಮ ಗಾಂಧಿ ಅವರ ಅನುಯಾಯಿ ಆದ ನೀವು ಇಂತಹ ಹೇಳಿಕೆ ನೀಡಬಾರದು. ಗಾಂಧಿ ಅವರು ಇದನ್ನೇ ಬೋಧಿಸಿದ್ದೆ. ಅಹಿಂಸಾ ತತ್ವ ಅಂದರೆ ಇದೇನಾ. ಇವತ್ತಿನ ಗಾಂಧಿಗಳು ಇಂತಹ ಹೇಳಿಕೆ ನೀಡಿ ಎಂದು ಹೇಳಿಕೊಡುತ್ತಿದ್ದರಾ ಎಂದರು.



