ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚು ಇರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ, ಆರೋಗ್ಯಕರವೆಂದು ಕಾಣುವ ಕೆಲವು ಆಹಾರಗಳಲ್ಲೂ ‘ಹಿಡನ್ ಸೋಡಿಯಂ’ ಇರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ ಸಮಸ್ಯೆ ಇರುವವರು ಉಪ್ಪಿನ ಸೇವನೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎಂಬುದು ತಪ್ಪು ಕಲ್ಪನೆ. ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದ ಸೋಡಿಯಂ ಅಡಗಿರುತ್ತದೆ. ವೈದ್ಯಕೀಯವಾಗಿ ಇದನ್ನು ‘ಹಿಡನ್ ಸೋಡಿಯಂ’ ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಉದಾಹರಣೆಗೆ, ಬ್ರೆಡ್ ಅನ್ನು ಹಲವರು ಲಘು ಮತ್ತು ಆರೋಗ್ಯಕರ ಆಹಾರವೆಂದು ಪರಿಗಣಿಸುತ್ತಾರೆ. ಆದರೆ ಒಂದು ಬ್ರೆಡ್ ಸ್ಲೈಸ್‌ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಇದೇ ರೀತಿ ಸಂಸ್ಕರಿಸಿದ ಆಹಾರಗಳಲ್ಲಿ ಸಹ ಹೆಚ್ಚುವರಿ ಉಪ್ಪು ಇರುವ ಸಾಧ್ಯತೆ ಇದೆ. ಇವುಗಳನ್ನು ನಿಯಂತ್ರಣವಿಲ್ಲದೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪು ಮಾತ್ರ ಸೇವಿಸಬೇಕು. ಆದರೆ ಬಹುತೇಕ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್‌ಗಳಂತಹ ಆಹಾರಗಳಿಂದಲೇ ದೇಹಕ್ಕೆ ಹೆಚ್ಚುವರಿ ಸೋಡಿಯಂ ಸೇರುತ್ತಿದೆ.
ಆದ್ದರಿಂದ, ಆಹಾರ ಸೇವಿಸುವಾಗ ಅದರ ಲೇಬಲ್ ಪರಿಶೀಲಿಸಿ, ಸೋಡಿಯಂ ಪ್ರಮಾಣ ಗಮನಿಸುವುದು ಅತ್ಯಗತ್ಯ. ಈ ಮೂಲಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

