ವಿಜಯಪುರ: ವಿಜಯಪುರ ಹೊರವಲಯದ ಭೂತನಾಳ ಕೆರೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಮೂವರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರು ಬೆಂಗಳೂರಿನ ಆರ್.ಟಿ. ನಗರ ನಿವಾಸಿಗಳಾದ ಬಾಲಕ ಮಹಮ್ಮದ್ ಹಯಾತ್, ಅಬ್ದುಲ್ ಖುದ್ದುಸ್ ಹಾಗೂ ಹೈದರ್ ಪಾಶಾ ಎಂದು ಗುರುತಿಸಲಾಗಿದೆ.
14 ಜನ ಕುಟುಂಬಸ್ಥರು ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿದ್ದರು. ಈ ವೇಳೆ ಭೂತನಾಳ ಕೆರೆ ವೀಕ್ಷಣೆಗೆ ಹೋಗಿದ್ದರು. ಮೃತ ಬಾಲಕ ನೀರಿಗೆ ಇಳಿದು ಆಟವಾಡುವಾಗ ಮುಳುಗಿದ್ದಾನೆ. ಬಾಲಕನ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಇಳಿದಿದ್ದಾರೆ. ಆದರೆ ರಕ್ಷಿಸಲಾಗದೇ ಇಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಆದರ್ಶ ನಗರ ಪೊಲೀಸರು ಎರಡು ಶವಗಳನ್ನು ಹೊರತೆಗೆದಿದ್ದು, ಇನ್ನೋರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಸದ್ಯ ಎಲ್ಲಾ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



