ಪಶ್ಚಿಮ ಬಂಗಾಳ: ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯುತ್ತಿರುವ ನಡುವೆ, ಏಪ್ರಿಲ್ 23 ಮತ್ತು 29ರಂದು ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇಂದು ಅವರು ಹಲ್ದಿಯಾ, ಅಸನ್ಸೋಲ್ ಮತ್ತು ಸೂರಿ ಸೇರಿದಂತೆ ಮೂರು ಕಡೆಗಳಲ್ಲಿ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಪ್ರಧಾನಿಯವರ ಇದು ಎರಡನೇ ಭೇಟಿ. ಮೊದಲಿಗೆ ಬೆಳಗ್ಗೆ 9 ಗಂಟೆಗೆ ಪುರ್ಬಾ ಮೇದಿನಿಪುರ ಜಿಲ್ಲೆಯ ಹಲ್ದಿಯಾ ಟೌನ್‌ಶಿಪ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್‌ನ ಪೋಲೋ ಮೈದಾನದ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂರನೇ ಸಭೆ ಮಧ್ಯಾಹ್ನ 2 ಗಂಟೆಗೆ ಬಿರ್ಭುಮ್ ಜಿಲ್ಲೆಯ ಸೂರಿ ಪಟ್ಟಣದ ಚಾಂದ್‌ಮರಿ ಮೈದಾನದಲ್ಲಿ ನಡೆಯಲಿದೆ.
ಹಲ್ದಿಯಾ ಪ್ರದೇಶವು ವಿಪಕ್ಷ ನಾಯಕ ಸುವೇಂದು ಅಧಿಕಾರಿಯ ಬಲಿಷ್ಠ ನೆಲೆಯಾಗಿದ್ದು, ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಮುಖ ಕೇಂದ್ರವಾಗಿದೆ. ಈ ಭಾಗದಲ್ಲಿ ಪಕ್ಷದ ಹಿಡಿತವನ್ನು ಉಳಿಸಿಕೊಳ್ಳಲು ನಡೆಯುವ ಸಮಾವೇಶ ಮಹತ್ವ ಪಡೆದುಕೊಂಡಿದೆ.
ಅಸನ್ಸೋಲ್ ಪ್ರದೇಶವು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಪ್ರಮುಖ ಕೈಗಾರಿಕಾ ಮತ್ತು ಕಲ್ಲಿದ್ದಲು ವಲಯವಾಗಿದ್ದು, ಬಿಜೆಪಿಯ ಬಲಿಷ್ಠ ನೆಲೆಯಾಗಿದೆ. ಇನ್ನು ಬಿರ್ಭುಮ್ ಜಿಲ್ಲೆಯ ಸೂರಿ ಪ್ರದೇಶವು ತೃಣಮೂಲ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದೆ.
ರಾಜ್ಯದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಬಿಜೆಪಿ ಸಾಧಿಸಿರುವ ಬೆಂಬಲವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಗಳೆಂದು ಪರಿಗಣಿಸಲಾದ ಪ್ರದೇಶಗಳಲ್ಲಿಗೂ ವಿಸ್ತರಿಸಲು ಪಕ್ಷ ಮುಂದಾಗಿದೆ.



