ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ತುಮಕೂರು ಫ್ಲೈಓವರ್ ರಸ್ತೆ ಮುಂದಿನ ವಾರ ಬಂದ್ ಆಗುವ ಸಾಧ್ಯತೆ ಇದೆ. ಸಂಚಾರ ಪೊಲೀಸರ ಅನುಮತಿ ಸಿಕ್ಕಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಫ್ಲೈಓವರ್‌ನ್ನು ಮುಚ್ಚಲಾಗುತ್ತದೆ.
ಫ್ಲೈಓವರ್‌ನಲ್ಲಿ ಅಂತಿಮ ಲೋಡ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಫ್ಲೈಓವರ್‌ಗೆ 1422 ಹೊಸ ಕೇಬಲ್‌ಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಲೋಡ್ ಟೆಸ್ಟಿಂಗ್ ಅಗತ್ಯವಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಈ ಪ್ರಸ್ತಾವನೆಗೆ ಅನುಮತಿ ದೊರೆತರೆ, ಏಪ್ರಿಲ್ 13ರಿಂದ ಏಪ್ರಿಲ್ 17ರವರೆಗೆ ಫ್ಲೈಓವರ್ ಸಂಪೂರ್ಣ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದ ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.
2010ರಲ್ಲಿ ಸಂಚಾರಕ್ಕೆ ಮುಕ್ತಗೊಂಡ ಈ ಮೇಲ್ಸೇತುವೆ ಸುಮಾರು 82 ಗಂಟೆಗಳ ಕಾಲ ಬಂದ್ ಆದರೆ ಗೊರಗೊಂಟೆಪಾಳ್ಯ ಸೇರಿದಂತೆ ಪೀಣ್ಯ ಭಾಗದವರೆಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.



