ಬೆಂಗಳೂರು: ರಾಜ್ಯದಲ್ಲಿ ಅತಿ ಕೆಟ್ಟ ಸರ್ಕಾರವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಟೀಕಿಸಿದ್ದಾರೆ.
ಜೆಡಿಎಸ್ ಪಕ್ಷ ಸ್ಥಾಪನೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ನಡೆದ ‘ಜೆಡಿಎಸ್ ಬೆಳ್ಳಿ ಹಬ್ಬ’ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಂ ನಾಯಕನನ್ನು ಗೆಲ್ಲಿಸಲು ‘ದರಿದ್ರ ನಾರಾಯಣ’ ರ್ಯಾಲಿ ನಡೆಸಲಾಯಿತು. ಆದರೆ ಆ ರ್ಯಾಲಿಗೆ ಸಿದ್ದರಾಮಯ್ಯ ಹಾಜರಾಗಲಿಲ್ಲ. ಕುಮಾರಸ್ವಾಮಿ ಸರ್ಕಾರವನ್ನು ಕೆಡವಲು ಕಾರಣರಾದವರೂ ಅವರೇ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಬೇಕು ಎಂದು ಹೇಳಿದ ದೇವೇಗೌಡರು,“ಬಿಹಾರದಲ್ಲಿ ನಿತೀಶ್ ಕುಮಾರ್ 20 ವರ್ಷ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಶಕ್ತಿ ನೀಡಿದ್ದು ಮೋದಿ ಎಂದು ಹೇಳಿದರು.
ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ ನಂತರ ಮೋದಿ ಅವರು ನಮ್ಮನ್ನು ತಮ್ಮೊಂದಿಗೆ ಬರಲು ಆಹ್ವಾನಿಸಿದರು. ಕಾಂಗ್ರೆಸ್ ಜೊತೆ ಇದ್ದು ಅನೇಕ ಬಾರಿ ನೋವು ಅನುಭವಿಸಿದ್ದೇವೆ. ಆದ್ದರಿಂದ ಮೋದಿ ಅವರ ಜೊತೆ ಹೋಗಲು ಕುಮಾರಸ್ವಾಮಿಗೆ ನಾನು ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.
ಈಗ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಅವರಿಗೆ ಸರ್ಕಾರದಿಂದ ಸಮರ್ಪಕ ಸಹಕಾರ ಸಿಗುತ್ತಿಲ್ಲ. ಎಚ್‌ಎಂಟಿ ಜಾಗದ ವಿಚಾರವಾಗಿ ನ್ಯಾಯಾಲಯಕ್ಕೂ ಹೋಗುತ್ತಿದ್ದಾರೆ ಎಂದರು.



