ಬೆಂಗಳೂರು: ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಬದಲಾವಣೆ ಕೊನೆಗೂ ಅಧಿಕೃತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಎರಡನೇ ಅವಧಿಯ ಆಡಳಿತಕ್ಕೆ ತೆರೆ ಎಳೆದಿದ್ದಾರೆ.
ರಾಜೀನಾಮೆಗೂ ಮುನ್ನ ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರೊಂದಿಗೆ ಕೊನೆಯ ಉಪಹಾರ ಸಭೆ ನಡೆಯಿತು. ಸಾಮಾನ್ಯವಾಗಿ ರಾಜಕೀಯ ಚಟುವಟಿಕೆಗಳಿಂದ ಕಿಕ್ಕಿರಿದಿರುತ್ತಿದ್ದ ಕಾವೇರಿ ನಿವಾಸ ಇಂದು ಭಾವುಕ ವಾತಾವರಣಕ್ಕೆ ಸಾಕ್ಷಿಯಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಚಿವರು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ರಾಜಕೀಯ ಪಯಣವನ್ನು ನೆನೆದು ಭಾವುಕರಾದರು. ಕೆಲ ಸಚಿವರ ಕಣ್ಣಂಚು ತೇವಗೊಂಡಿತ್ತು. ಇದೇ ವೇಳೆ ಸಹೋದ್ಯೋಗಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಬಳಿಕ ಮಧ್ಯಾಹ್ನ ಲೋಕಭವನದತ್ತ ತೆರಳಿದರು.
ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ಸಂವಿಧಾನಾತ್ಮಕ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರ ಅಧಿಕೃತ ಅನುಮೋದನೆಯ ಬಳಿಕವೇ ರಾಜೀನಾಮೆ ಜಾರಿಗೆ ಬರಲಿದೆ.
ಮೂಲಗಳ ಪ್ರಕಾರ ರಾಜ್ಯಪಾಲರು ನಾಳೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದ್ದು, ಬಳಿಕ ರಾಜೀನಾಮೆ ಅಂಗೀಕಾರದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿ ಸಂದೇಶಕ್ಕೆ ಗೌರವ ಸೂಚಿಸಿ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಅಧ್ಯಾಯವೊಂದು ಅಂತ್ಯ ಕಂಡಂತಾಗಿದೆ.



