ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಗೌರವದಿಂದ ನಡೆಸಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಅವಮಾನಕರವಾಗಿ ನಡೆಸಿಕೊಂಡಿದೆ. ಆದರೆ ತಮ್ಮ ಹಿರಿತನದ ಗೌರವಕ್ಕೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ನೋವನ್ನು ಹೊರಹಾಕುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಇದೇ. ಇದು ಬಂಡವಾಳಶಾಹಿಗಳಿಗೆ ಮಣೆ ಹಾಕುವ ಪಕ್ಷವಾಗಿದೆ. ಮಾನವೀಯತೆಯಿಂದ ಹೈಕಮಾಂಡ್ ನಡೆದುಕೊಳ್ಳಬೇಕಿತ್ತು. ಆದರೆ ಆ ರೀತಿಯ ವರ್ತನೆ ಕಾಣಿಸಲಿಲ್ಲ ಎಂದು ಕಿಡಿಕಾರಿದರು.
ಮುಂದುವರಿದು, ಮೊದಲು ಹೈಕಮಾಂಡ್ ‘ಸಿದ್ದರಾಮಯ್ಯ ಜೀ’ ಎಂದು ಕರೆಯುತ್ತಿತ್ತು. ಈಗ ‘ಸಿದ್ದರಾಮಯ್ಯ ಯು ಮಸ್ಟ್ ರಿಸೈನ್’ ಎಂದು ಹೇಳುತ್ತಿದೆ. ನನ್ನನ್ನು ಹೈಕಮಾಂಡ್ ಗೌರವಿಸಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ ಹೈಕಮಾಂಡ್ ಒಂದು ದಿನವೂ ಸಮಯ ನೀಡದೇ ತಕ್ಷಣ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.



