ಪಾಟ್ನಾ: 14 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಐವರು ನಾಪತ್ತೆಯಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪ್ರವಾಹದಿಂದ ತತ್ತರಿಸಿರುವ ಪಾಟ್ನಾದ ಉಮಾನಾಥ್ ಗಂಗಾ ಘಾಟ್ ಸಮೀಪ ಈ ದುರಂತ ಸಂಭವಿಸಿದೆ. ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದಲ್ಲದೆ, ಬಲವಾದ ಗಾಳಿಯೂ ಬೀಸುತ್ತಿದ್ದ ಹಿನ್ನೆಲೆ ದೋಣಿ ನಿಯಂತ್ರಣ ತಪ್ಪಿ ಮುಳುಗಿದೆ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಎಸ್ಡಿಆರ್ಎಫ್ ತಂಡ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ದೋಣಿಯಲ್ಲಿದ್ದ ಏಳು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮೃತರನ್ನು ನೀಲಂ ಕುಮಾರಿ (30) ಹಾಗೂ ಕಾಶಿ ಕುಮಾರ್ (15) ಎಂದು ಗುರುತಿಸಲಾಗಿದೆ. ಇನ್ನೂ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು. ಅಲ್ಲದೆ ಪ್ರಯಾಣಿಕರಿಗೆ ಯಾವುದೇ ಸುರಕ್ಷತಾ ಕವಚಗಳನ್ನು ಒದಗಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರತಿಕೂಲ ಹವಾಮಾನ ಮತ್ತು ನದಿಯ ಅಪಾಯಕಾರಿ ಪರಿಸ್ಥಿತಿಗಳ ನಡುವೆಯೂ ಮುಳುಗು ತಜ್ಞರು ಹಾಗೂ ರಕ್ಷಣಾ ಸಿಬ್ಬಂದಿ ನದಿಯ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.



