ಮಧ್ಯಪ್ರದೇಶ: ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅತ್ತೆ ಮತ್ತು ಮಾಜಿ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ.
ಕೆಳ ಹಂತದ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಸಮರ್ಪಕವಾಗಿ ಪರಿಶೀಲಿಸದೇ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಗಿರಿಬಾಲಾ ಸಿಂಗ್ ಹಾಗೂ ಅವರ ಪುತ್ರ ಸಮರ್ಥ್ ಸಿಂಗ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಗಣಿಸಿದ್ದ ಸೆಷನ್ಸ್ ಕೋರ್ಟ್ ಮೇ 15ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಜಾಮೀನು ರದ್ದುಪಡಿಸಿದೆ. ಈ ಕುರಿತು ಆದೇಶ ನೀಡಿದ ಹೈಕೋರ್ಟ್ ರಜಾಪೀಠದ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ, ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯ ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ಹೇಳಿದ್ದಾರೆ.
ಪ್ರಕರಣದ ವಾಸ್ತವಾಂಶಗಳು ಹಾಗೂ ಆರೋಪಿಗಳ ವಿರುದ್ಧ ಇರುವ ಗಂಭೀರ ಆರೋಪಗಳನ್ನು ಪರಿಗಣಿಸಿದಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ ನಿರೀಕ್ಷಣಾ ಜಾಮೀನು ಆದೇಶ ಸಮಂಜಸವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಮೇ 12ರಂದು ತ್ವಿಶಾ ಶರ್ಮಾ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿ ಕಳೆದ ಸೋಮವಾರದಿಂದ ಸಿಬಿಐ ತನಿಖೆ ಆರಂಭಿಸಿದೆ. ಇದೇ ವೇಳೆ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ಮರು ಎಫ್‌ಐಆರ್ ಕೂಡ ದಾಖಲಾಗಿದೆ.
ಇನ್ನೊಂದೆಡೆ, ಗಿರಿಬಾಲಾ ಸಿಂಗ್ ಅವರ ಜಾಮೀನು ರದ್ದಾದ ಬಳಿಕ ಪ್ರತಿಕ್ರಿಯೆ ನೀಡಿದ ಸಂತ್ರಸ್ತ ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ, “ತ್ವಿಶಾ ಪ್ರಕರಣದಲ್ಲಿ ಕೊನೆಗೂ ನ್ಯಾಯ ದೊರಕಿದೆ. 36 ವರ್ಷಗಳ ಕಾಲ ನ್ಯಾಯಾಂಗ ಸೇವೆಯಲ್ಲಿ ಇದ್ದ ಗಿರಿಬಾಲಾ ಸಿಂಗ್ ಕಾನೂನಿಗೆ ಗೌರವ ನೀಡಬೇಕಾಗಿದೆ. ಅವರು ಸಿಬಿಐಗೆ ಶರಣಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ.



