ಹಾಸನ: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವತಿಯ ಸಾವಿನ ನಡುವೆ ಮಾನವೀಯತೆಯ ಸ್ಪರ್ಶ ಮೂಡಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಕಾರೇಹಳ್ಳಿ ಗ್ರಾಮದ ಮೋನಿಕಾ (18), ಏಪ್ರಿಲ್ 5ರಂದು ಸಂಜೆ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಭಾರೀ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಖಚಿತಪಡಿಸಿದರು.
ಮಗಳ ಸ್ಥಿತಿ ಅರಿತ ಪೋಷಕರು ಮೊದಲಿಗೆ ದುಃಖದಲ್ಲಿ ಮುಳುಗಿದ್ದರೂ, ಬಳಿಕ ಧೈರ್ಯದಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿ, ಐದು ಮಂದಿಗೆ ಹೊಸ ಜೀವನ ನೀಡಿದ್ದಾರೆ.
ಕೇವಲ 18 ವರ್ಷದಲ್ಲೇ ಜೀವನ ಕಳೆದುಕೊಂಡ ಮೋನಿಕಾ, ತನ್ನ ಕೊನೆಯ ಕ್ಷಣದಲ್ಲೇ ಮಾನವೀಯತೆಯ ಶ್ರೇಷ್ಠ ಸಂದೇಶವೊಂದನ್ನು ಬಿಟ್ಟು ಹೋಗಿದ್ದಾಳೆ. ಸಮಾಜಕ್ಕೆ ಮಾದರಿಯಾಗಿರುವ ಈ ಘಟನೆ, ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



