ರಾಮನಗರ: ಜಿಲ್ಲೆಯ ಮದ್ದೂರು–ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣ ಸಮೀಪ ರೈಲು ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಳಿಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಹಾಗೂ ಬಟ್ಟೆ ತುಂಬಿದ್ದ ಪ್ಲಾಸ್ಟಿಕ್ ಚೀಲ ಕಂಡು ಬಂದ ಹಿನ್ನೆಲೆಯಲ್ಲಿ ಲೋಕೋಪೈಲೆಟ್ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ, ಮತ್ತೊಂದು ರೈಲಿನಲ್ಲಿ ಸಾಗಿಸುತ್ತಿದ್ದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಇದ್ದ ಚೀಲ ಅಕಸ್ಮಾತ್ ಕೆಳಗೆ ಬಿದ್ದಿದ್ದು, ಅದರ ಹಿಂದೆ ಬಂದ ಮಂಗಳಾ ಎಕ್ಸ್‌ಪ್ರೆಸ್‌ಗೆ ಚೀಲ ಸಿಲುಕಿದ ಪರಿಣಾಮ ವಸ್ತುಗಳು ಹಳಿಯ ಮೇಲೆ ಚದರಿಕೊಂಡಿರುವುದು ತಿಳಿದುಬಂದಿದೆ.
ಘಟನೆ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಆಕಸ್ಮಿಕವಾಗಿ ಬಿದ್ದ ವಸ್ತುಗಳಾ ಅಥವಾ ಉದ್ದೇಶಪೂರ್ವಕವಾಗಿ ಇಡಲಾಗಿದೆಯಾ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಸುಮಾರು ಅರ್ಧಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.



