ಬೆಂಗಳೂರು: ನಗರದಲ್ಲಿ ಶೋರೂಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಭಾರೀ ಅನಾಹುತ ಸಂಭವಿಸಿರುವ ಘಟನೆ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಮಾಡಲು ಕಾರು ನೀಡಿದ ಪರಿಣಾಮ, ಸರಣಿ ಅಪಘಾತ ಸಂಭವಿಸಿ ಹಲವರಿಗೆ ಗಾಯಗಳಾಗಿವೆ.
ಏಪ್ರಿಲ್ 12ರಂದು ಅಭಿಲಾಷ್ ಎಂಬಾತ ಮಹೀಂದ್ರಾ ಕಾರು ಶೋರೂಂಗೆ ಕಾರು ಖರೀದಿಸುವ ಉದ್ದೇಶದಿಂದ ಬಂದಿದ್ದನು. ಆದರೆ ಆತ ಮದ್ಯಪಾನ ಮಾಡಿರುವುದು ತಿಳಿದಿದ್ದರೂ, ಶೋರೂಂ ಸಿಬ್ಬಂದಿ ಕಾರನ್ನು ಟೆಸ್ಟ್ ಡ್ರೈವ್‌ಗೆ ನೀಡಿರುವುದು ಗಂಭೀರ ನಿರ್ಲಕ್ಷ್ಯವೆಂದು ಆರೋಪಿಸಲಾಗಿದೆ.
ಕಾರು ಚಲಾಯಿಸಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಯಿಂದ ರಮೇಶ್ ಎಂಬುವವರ ಕಾಲು ಮುರಿದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಅಭಿಲಾಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಗಾಯಗೊಂಡಿರುವ ಆತ ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹದೇವಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಎನ್ಎಸ್ ಸೆಕ್ಷನ್ 125(a), 281 ಹಾಗೂ ಐಎಂವಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದಲ್ಲದೆ, ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಅವಕಾಶ ನೀಡಿದ ಶೋರೂಂ ಸಿಬ್ಬಂದಿಯ ವಿರುದ್ಧವೂ ತನಿಖೆ ಚುರುಕುಗೊಂಡಿದೆ.



