ಚೆನ್ನೈ: ವಾಲ್ಪರೈ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸೇರಿ 9 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತರನ್ನು ಅಜಿತಾ (54), ರಾಮ್ಲಾ (52), ಸುಹ್ರಾ (43), ಆಶಾ (41), ಮಜೀರ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಮ್ (12) ಎಂದು ಗುರುತಿಸಲಾಗಿದೆ. ಇವರು ಮಲಪ್ಪುರಂ ಜಿಲ್ಲೆಯ ಪಾಂಗ್‌ನ ಪಲ್ಲಿಪರಂಬು ಸರ್ಕಾರಿ ಎಲ್‌ಪಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಯಾಗಿದ್ದರು.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎಲ್ಲರೂ ಸೇರಿಕೊಂಡು ಪ್ರವಾಸಕ್ಕಾಗಿ ತಮಿಳುನಾಡಿಗೆ ತೆರಳಿದ್ದರು. ವಾಪಸ್ಸಾಗುವ ವೇಳೆ ಸಂಜೆ ಸುಮಾರು 5 ಗಂಟೆಗೆ ಘಾಟ್‌ನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ.
ಟಿಟಿ ವಾಹನವು 13ನೇ ಹೇರ್‌ಪಿನ್ ತಿರುವಿನಿಂದ ನಿಯಂತ್ರಣ ತಪ್ಪಿ 9ನೇ ತಿರುವಿನವರೆಗೆ ಉರುಳಿಬಿದ್ದಿದ್ದು, ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ನಾಶವಾಗಿದೆ. ಪರಿಣಾಮವಾಗಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನುಳಿದಂತೆ ವಾಹನ ಚಾಲಕ ಸೇರಿ ನಾಲ್ವರನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರ ಅಂತಿಮ ದರ್ಶನ ಇಂದು ಅಂಬಲಪ್ಪರಂಬ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದ್ದು, ಶಿಕ್ಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.



