ಮಂಗಳೂರು/ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ತಾರತಮ್ಯ ಆರೋಪಗಳು ಕೇಳಿಬಂದಿದ್ದು, ಎಸ್‌ಪಿ ಎಸ್ ಎಸ್ ಕಾಶಿ ಡಿಜಿಪಿ ಸಲೀಂ ಅವರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಾಶಿ, ಅಧಿಕಾರ ದುರುಪಯೋಗ, ದರ್ಪ ಮತ್ತು ಸ್ವಜನಪಕ್ಷಪಾತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಮೇಲೆ ಅನಾವಶ್ಯಕ ಒತ್ತಡ ಹಾಕಿ, ತಾವು ಹೇಳಿದಂತೆ ಕೆಲಸ ಮಾಡದಿದ್ದರೆ ಮೆಮೊಗಳ ಮೂಲಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಿಶೇಷವಾಗಿ ಕನ್ನಡಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಅಂಶ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಳಹಂತದ ಸಿಬ್ಬಂದಿ ಮೇಲೆ ದೌರ್ಜನ್ಯ ತೋರಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬಂದ ಅಧಿಕಾರಿಗಳು ಕನ್ನಡಿಗರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನೂ ಕಾಶಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಂಗಳೂರು ಕಮಿಷನರ್‌ನ ಕಿರುಕುಳ ಹಾಗೂ ಇತರೆ ಅಕ್ರಮಗಳ ಸಂಪೂರ್ಣ ವಿವರವನ್ನು ನೀಡಲು ಅವಕಾಶ ನೀಡುವಂತೆ ಕೋರಿರುವ ಕಾಶಿ, ಒಂದು ವಾರದೊಳಗೆ ಡಿಜಿಪಿ ಭೇಟಿಗೆ ಸಮಯ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳತ್ತ ಎಲ್ಲರ ಗಮನ ಕೇಂದ್ರೀಕರಿಸಿದೆ.



