ಕೊಡಗು: ಜಿಲ್ಲೆಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ ವೃಜೇಶ್ ಕುಮಾರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ವಿಶಾಲ್ ಮೇಲೂ ಆರೋಪಗಳು ಕೇಳಿಬಂದಿದ್ದು, ಅವರನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



