ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯರಿಗೆ ಬೈಕ್ನಲ್ಲಿ ಹಿಂಬದಿಯಿಂದ ಬಂದು ಕಿರುಕುಳ ನೀಡಿದ ಘಟನೆ ನಗರದ ಯಲಹಂಕ ಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಾವಗಡ ಮೂಲದ ಹರೀಶ್ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಇಬ್ಬರೂ ನಗರದಲ್ಲಿ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಘಟನೆ ಏಪ್ರಿಲ್ 22ರಂದು ಯಲಹಂಕದಿಂದ ಬಾಗಲೂರು ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ನಡೆದಿದ್ದು, ಬೈಕ್ನಲ್ಲಿ ಬಂದ ಆರೋಪಿಗಳು ಯುವತಿಯರ ಅಂಗಾಂಗಗಳನ್ನು ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.
ಈ ಕೃತ್ಯ ಹಿಂಬದಿಯಿಂದ ಬರುತ್ತಿದ್ದ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ಆಧಾರವಾಗಿ ತಕ್ಷಣವೇ ಸುವೋಮೋಟೋ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.



