ನವದೆಹಲಿ: ಕೊಪ್ಪಳ ಜಿಲ್ಲೆಯ ನವವೃಂದಾವನ ಗಡ್ಡೆಯ ಪೂಜೆ ಹಾಗೂ ಸಂಬಂಧಿತ ಆಚರಣೆಗಳ ವಿಚಾರವಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಮಠಗಳ ನಡುವೆ ನಡೆದು ಬಂದಿದ್ದ ಸುದೀರ್ಘ ಕಾನೂನು ಹೋರಾಟಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ.
ಈ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ 2025ರ ಮಾರ್ಚ್ 19ರಂದು ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ, ಮಧ್ಯಸ್ಥಿಕೆಯ ಮೂಲಕ ಈ ವಿವಾದ ಇತ್ಯರ್ಥಗೊಂಡಿದೆ ಎಂದು ತಿಳಿಸಿದೆ.
ಮಧ್ಯಸ್ಥಿಕೆ ಪ್ರಕ್ರಿಯೆಯ ಯಶಸ್ವಿ ಪ್ರಯತ್ನಗಳಿಂದ ಎರಡು ಮಠಗಳ ನಡುವಿನ ದೀರ್ಘಕಾಲದ ವಿವಾದಕ್ಕೆ ಸೌಹಾರ್ದಯುತ ಅಂತ್ಯ ಕಂಡುಬಂದಿದೆ. 2026ರ ಜನವರಿ 3ರಂದು ಮಾಡಿಕೊಂಡ ಒಪ್ಪಂದ ಮತ್ತು ಏಪ್ರಿಲ್ 13ರ ತಿಳುವಳಿಕೆ ಪತ್ರದ ಆಧಾರದ ಮೇಲೆ ವಿಶೇಷ ಮೇಲ್ಮನವಿ ಅರ್ಜಿಯನ್ನು ವಿಲೇವಾರಿ ಮಾಡಬಹುದು ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಇದೇ ವೇಳೆ, ಕಕ್ಷಿದಾರರ ಪರವಾಗಿ ಹಿರಿಯ ವಕೀಲ ಡಿ.ಎಸ್. ನಾಯ್ಡು ಹಾಗೂ ವಕೀಲ ಅಲ್ಜೋ ಕೆ. ಜೋಸೆಫ್ ಸಲ್ಲಿಸಿದ ದಾಖಲೆಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಉತ್ತರಾದಿ ಮಠ ಮತ್ತು ಮಂತ್ರಾಲಯ ಮಠಗಳ ನಡುವಿನ ಒಪ್ಪಂದ ಹಾಗೂ ತಿಳುವಳಿಕೆ ಪತ್ರಗಳನ್ನು ಈ ಆದೇಶದ ಭಾಗವಾಗಿಸಲಾಗಿದೆ.
ಮಾಧ್ವ ಪರಂಪರೆಯ ಎರಡು ಪ್ರಮುಖ ಮಠಗಳಾದ ಉತ್ತರಾದಿ ಮಠ ಮತ್ತು ರಾಘವೇಂದ್ರ ಸ್ವಾಮಿ ಮಠಗಳ ನಡುವಿನ ಹಲವು ದಶಕಗಳ ವಿವಾದಗಳನ್ನು ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಲು ಎರಡೂ ಮಠಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದವು. ಬೆಂಗಳೂರಿನಲ್ಲಿ ನಡೆದ ಸೌಹಾರ್ದ ಸಮಾವೇಶದಲ್ಲಿ ಎರಡೂ ಮಠಗಳ ಸ್ವಾಮೀಜಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ತಿಳಿದುಬಂದಿದೆ.



