ಮಂಗಳೂರು: ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದು, ಕರಾವಳಿ ನಗರ ಮಂಗಳೂರಲ್ಲಿಯೂ ನೀರಿನ ಬಿಕ್ಕಟ್ಟು ಎದುರಾಗಿದೆ.
ಮಂಗಳೂರು ನಗರಕ್ಕೆ ನೀರು ಪೂರೈಸುವ ಪ್ರಮುಖ ಮೂಲವಾದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 4.53 ಮೀಟರ್‌ಗೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಮೇ 1ರಿಂದ ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ರೇಷನಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸುಮಾರು 5.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಮಂಗಳೂರು ನಗರಕ್ಕೆ ಪ್ರತಿ ದಿನ ಸರಾಸರಿ 160 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಿಂದ ದಿನಕ್ಕೆ ಸುಮಾರು 40–50 ಎಂಎಲ್‌ಡಿ ನೀರು ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಎಎಂಆರ್ ಹಾಗೂ ಬಿಳಿಯೂರು ಡ್ಯಾಂಗಳಲ್ಲಿ ಇರುವ ನೀರಿನ ಸಂಗ್ರಹ ಹಾಗೂ ಕೆಳಭಾಗದ ನೀರನ್ನು ಮತ್ತೆ ಪಂಪ್ ಮಾಡುವ ಮೂಲಕ ಜೂನ್ ಮೊದಲ ವಾರದವರೆಗೆ ನೀರಿನ ಪೂರೈಕೆಯನ್ನು ನಿರ್ವಹಿಸಬಹುದು. ಆದರೆ ಅದರವರೆಗೆ ಜಾಗೃತವಾಗಿ ನೀರನ್ನು ಬಳಕೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಮಹಾನಗರ ಪಾಲಿಕೆ ಗಾರ್ಡನಿಂಗ್, ವಾಹನ ತೊಳೆಯುವುದು ಸೇರಿದಂತೆ ಅನಗತ್ಯ ನೀರಿನ ಬಳಕೆಯನ್ನು ತಪ್ಪಿಸುವಂತೆ ಸೂಚನೆ ನೀಡಿದೆ. ಜೂನ್ ವೇಳೆಗೆ ಮುಂಗಾರು ಮಳೆ ಆರಂಭವಾದರೆ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗುವ ನಿರೀಕ್ಷೆಯಿದೆ.



