ಉಡುಪಿ: ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 20ರಂದು ಬೆಳಿಗ್ಗೆ ದೇವಸ್ಥಾನದ ಹೊರ ಪೌಳಿಯಿಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬನು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಮಲಶಿಲೆ ಗ್ರಾಮದ ಎಳಬೇರು ನಿವಾಸಿ ಸಂದೀಪ್ ಆಚಾರಿ (28) ಹಾಗೂ ಕೊಪ್ಪಳ ಜಿಲ್ಲೆಯ ಬನಹಟ್ಟಿ ಗ್ರಾಮದ ಮುತ್ತಪ್ಪ ಶರಣಪ್ಪ ವಾಲಿಕರ್ (40) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕ್, ಮೂರು ಮೊಬೈಲ್ ಫೋನ್ಗಳು ಹಾಗೂ ದೇವಸ್ಥಾನದ ಕಾಣಿಕೆ ಹುಂಡಿಯೊಂದಿಗೆ ಒಟ್ಟು ಅಂದಾಜು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



